

ಸಮಾಜದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ ಸವಾಲುಗಳು ಎದುರಾಗುವುದು ಸಹಜ. ಅಂತಹ ಸವಾಲುಗಳನ್ನು ಎದುರಿಸಿ ಗುರಿ ತಲುಪಬೇಕು. ಅಂತಹ ಸವಾಲುಗಳನ್ನು ಎದುರಿಸಲು ಸದ್ಗುರುಗಳ ಮಾರ್ಗದರ್ಶನ ಅಗತ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಶ್ರೀಮದ್ವೀರಶೈವ ಸದ್ಭೋದನಾ ಸಂಸ್ಥೆ ಆಶ್ರಯದಲ್ಲಿ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಆಯೋಜಿಸಿದ್ದ ಶ್ರೀರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮೋತ್ತೇಜಕ ಸಂಗಮ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶ್ರೀಜಗದ್ಗುರು ರೇಣುಕಾಚಾರ್ಯರ ಉದಾತ್ತ ತತ್ವ ಸಿದ್ದಾಂತಗಳನ್ನು ಇಂದಿಗೂ ಪರಿಪಾಲಿಸುತ್ತಾ, ನಾಡಿನ ಅಪಾರ ಭಕ್ತ ಸಮುದಾಯವನ್ನು ಮುನ್ನಡೆಸುತ್ತಿರುವ ಶ್ರೀ ರಂಭಾಪುರಿ ಡಾ,ವೀರಸೋಮೇಶ್ವರ ಜಗದ್ಗುರುಗಳ ಸೇವೆ ಅಪಾರವಾಗಿದೆ. ಧರ್ಮದ ಅಭಿವೃದ್ಧಿಗಾಗಿ ಅವರು ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಧರ್ಮದ ಕಾರ್ಯ ಕೇವಲ ಗುರುಗಳ ಜವಾಬ್ದಾರಿ ಎಂದುಕೊಳ್ಳುವುದು ಅಪರಾಧ. ಗುರುಗಳ ಕಾರ್ಯಕ್ಕೆ ಕೈಜೋಡಿಸಿದರೆ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸಬಹುದು. ನಮ್ಮ ತಂದೆಯವಾದ ಬಿ.ಎಸ್.ಯಡಿಯೂರಪ್ಪನವರು ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. 'ತಿಳಿದವರ ಮುಂದೆ ತಲೆ ತಗ್ಗಿಸಿ ನಡೆಯಬೇಕು, ತುಳಿದವರ ಮುಂದೆ ತಲೆ ಎತ್ತಿ ನಡೆಯಬೇಕು' ಸಾರ್ವಜನಿಕ ಬದುಕಿನಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗುತ್ತವೆ. ಅದಕ್ಕೆ ಗುರುಗಳ ಆಶೀರ್ವಾದ, ಮಾರ್ಗದರ್ಶನದಲ್ಲಿ ಮುಂದೆ ಹೋಗುವ ಕೆಲಸ ಮಾಡಬೇಕಿದೆ.
ಕಳೆದ ಬಾರಿ ಮಳೆ ಇಲ್ಲದೆ ಬರಗಾಲದಿಂದ ರಾಜ್ಯ ತತ್ತರಿಸಿ ಹೋಗಿತ್ತು. ಆದರೆ ಗುರುಗಳ ಆಶೀರ್ವಾದದಿಂದ, ದೇವರ ಕೃಪೆಯಿಂದ ಈ ವರ್ಷ ಚನ್ನಾಗಿ ಮಳೆ ಆಗಿ, ಕೆರೆ-ಕಟ್ಟೆ, ನದಿ-ಅಣೆಕಟ್ಟೆಗಳು ಭರ್ತಿಯಾಗಿವೆ. ಗುರುಗಳ ಆಶೀರ್ವಾದ ಎಲ್ಲರ ಮೇಲೆ ಹೀಗೆಯೇ ಇರಲಿ ಎಂದು ವಿಜಯೇಂದ್ರ ಹೇಳಿದರು.