

ಮಂಡ್ಯ: ನಗರದ ಹೊರವಲಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಯಲ್ಲಿ ಜಿಲ್ಲೆಯ ಪಕ್ಷಗಳ ಕಾರ್ಯಕರ್ತರನ್ನು ಪರಿಗಣಿಸಿ ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರು ನೇಮಕ ಮಾಡಬೇಕೆಂದು ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಆಗ್ರಹಿಸಿದರು.
30 ವರ್ಷದ ನಂತರ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದೆ. ಸಮ್ಮೇಳನಾಧ್ಯಕ್ಷರಾಗಿ ಗೋ.ರು.ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಿರುವುದು ಸ್ಥಾನಕ್ಕೆ ತಕ್ಕ ಗೌರವ ದೊರೆತಂತಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು.
ಸಾಹಿತ್ಯ ಪರಿಷತ್ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಟ್ಟರೆ ಜಿಲ್ಲೆಯ ಬೇರಾವ ಪಕ್ಷದ ಕಾರ್ಯಕರ್ತರನ್ನು ಸಮ್ಮೇಳನದ ಸಮಿತಿಗಳಿಗೆ ಪರಿಗಣನೆ ಮಾಡದಿರುವುದು ಖಂಡನೀಯ. ಕನ್ನಡ ನುಡಿಜಾತ್ರೆಯ ತೇರನ್ನು ಎಳೆಯಲು ಜಿಲ್ಲೆಯ ಎಲ್ಲ ಪಕ್ಷಗಳು, ಸಂಘಟನೆಗಳು ಉತ್ಸುಕವಾಗಿವೆ. ಈ ನಿಟ್ಟಿನಲ್ಲಿ ಸಮಿತಿಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಮೊದಲೇ ಬೇಡಿಕೆಯನ್ನು ಮುಂದಿರಿಸಿದ್ದು, ಮಂಡ್ಯ ಕ್ಷೇತ್ರದ ಶಾಸಕರು ಸಮಿತಿಗಳಿಗೆ ಸೇರಿಸುವ ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗೆ ಅಧಿಕಾರದ ಸೀಮಿತವಾಗಿದ್ದು, ಅವರಿಗೆ ಸಮಿತಿಯನ್ನು ವಿಸ್ತರಿಸುವ ಅಧಿಕಾರ ಇರದ ಕಾರಣ ಮಹೇಶ ಜೋಶಿ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತ್‌ಕುಮಾರ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಬಿ.ಕೃಷ್ಣ, ಪ್ರಸನ್ನಕುಮಾರ್ ಇತರರಿದ್ದರು.