

ಹುಬ್ಬಳ್ಳಿ: ಇಲ್ಲಿಯ ಕಿತ್ತೂರ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಈ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ವಿಳಂಬವಾಗುತ್ತಿದೆಯೆಂದು ಶಾಸಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರು ಇಲ್ಲಿಯ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ಠಿಕಾಣಿ ಹೂಡಿ ಅಹೋರಾತ್ರಿ ಧರಣಿ ನಡೆಸಿದರು.
ಗುರುವಾರ ಮಧ್ಯಾಹ್ನದಿಂದ ಧರಣಿ ಆರಂಭಿಸಿ ರಾತ್ರಿಯೂ ಮುಂದುವರಿಸಿದ್ದಾರೆ. ಈದ್ಗಾ ಮೈದಾನದಲ್ಲಿ ಕಳೆದ ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತಕ್ಷಣ ಅನುಮತಿ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಧರಣಿ ನಿರತರೊಂದಿಗೆ ಪಾಲಿಕೆ ಆಯಿಕ್ತ ಡಾ. ಈಶ್ವರ ಉಳ್ಳಾಗಡ್ಡಿ ಚರ್ಚೆ ನಡೆಸಿದರೂ ಧರಣಿ ನಿರರು ಪಟ್ಟು ಸಡಿಸಲಿಲ್ಲ. ಬಳಿಕ ಪಾಲಿಕೆ ಆಯುಕ್ತರು ಗೃಹ ಕಚೇರಿಯಲ್ಲಿಯೇ ಕರ್ತವ್ಯ ನಿರ್ವಹಿಸಿದರು.
ಪಾಲಿಕೆ ಒಡೆತನದ ಈದ್ಗಾ ಮೈದಾನದಲ್ಲಿ ಕಳೆದ ವರ್ಷ ಮೂರು ದಿನಗಳ ಕಾಲ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲಾಗಿತ್ತು. ಈ ಬಾರಿಯೂ ಮೂರು ದಿನಗಳ ಗಣೇಶ ಹಬ್ಬ ಆಚರಣೆಗೆ ಪಾಲಿಕೆಯ ಸಾಮಾನ್ಯ ಸಭೆ (ಆಗಸ್ಟ್ 31)ಯಲ್ಲಿ ಠರಾವು ಸ್ವೀಕರಿಸಲಾಗಿದೆ. ಆದರೂ ಪಾಲಿಕೆ ಆಯುಕ್ತರು ಅನುಮತಿ ನೀಡದಿರುವುದನ್ನು ಖಂಡಿಸಿ ಪಾಲಿಕೆಯ ಬಿಜೆಪಿ ಸದಸ್ಯರು, ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದಾರೆ.
ಗುರುವಾರ ಸಂಜೆ ಆಯುಕ್ತರ ಕಚೇರಿ ಎದುರು ಭಜನೆ ಸಹ ನಡೆಸಿದರು. ಧರಣಿ ನಿರತರು ಅಲ್ಲಿಯೇ ಮಧ್ಯಾಹ್ನದ ಊಟ, ರಾತ್ರಿ ಭೋಜನ ಸೇವಿಸಿದರು. ಪಾಲಿಕೆ ಆವರಣದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ದಲಿತ ಪರ ಸಂಘಗಳು ಸೇರಿ 24 ಸಂಘಟನೆಗಳು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿ ಮನವಿ ಸಲ್ಲಿಸಿವೆ.