ಕೃಷಿ ಮಸೂದೆಗೆ ಪ್ರತಿಪಕ್ಷಗಳಿಂದ ವಿನಾಕಾರಣ ವಿರೋಧ - ಎಂ.ಬಿ. ಝಿರಲಿ

03
Published on

ಬೆಳಗಾವಿ: ಪ್ರತಿಪಕ್ಷ ನಾಯಕರು ತಮ್ಮ ರಾಜಕೀಯ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸುತ್ತಿರುವುದಲ್ಲದೆ, ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಎಂ.ಬಿ. ಝಿರಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ರೈತಪರ ಸಾಕಷ್ಟು ಯೋಜನೆ ಜಾರಿಗೆ ತಂದಿದೆ. ಇದೀಗ ರೈತರ ಕಲ್ಯಾಣಕ್ಕಾಗಿ ಕೃಷಿ ಮಸೂದೆ ತಿದ್ದುಪಡಿಗೆ ಅಧಿವೇಶನದಲ್ಲಿ ಅಂಗೀಕಾರ ಮಾಡಿದೆ. ಆದರೆ, ವಿರೋಧ ಪಕ್ಷಗಳು ರೈತರಿಗೆ ತಪ್ಪು ಸಂದೇಶ ನೀಡುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ಚರ್ಚಿಸುವ ಸೌಜನ್ಯವಿಲ್ಲ: ಈಗಾಗಲೇ ಕೇಂದ್ರ ಸರ್ಕಾರವು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಉತ್ಪನ್ನಗಳನ್ನು ಬೇರೆಡೆ ಸಾಗಣೆ ಮಾಡಲು ಕಿಸಾನ್ ರೈಲು ವ್ಯವಸ್ಥೆ, ಕೃಷಿ ಉತ್ಪನ್ನ ಮಾರಾಟಕ್ಕಾಗಿ ವಿಶೇಷ ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ರೈತರ ಕಲ್ಯಾಣಕ್ಕಾಗಿ ಇನ್ನಿತರ ಯೋಜನೆ ಜಾರಿಗೆ ತಂದಿದೆ. ಆದರೂ ಪ್ರತಿಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧಿಸುವ ಕೆಲಸ ಮಾಡುತ್ತಿವೆ. ಕೃಷಿ ಮಸೂದೆಯಲ್ಲಿನ ಸಾಧಕ-ಬಾಧಕ ಕುರಿತು ಚರ್ಚಿಸುವ ಸೌಜನ್ಯ
ಅವರಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕ್ರಾಂತಿಕಾರಿ ಬೆಳವಣಿಗೆ: ಕೃಷಿ ಮಸೂದೆಯ ಮೂಲಕ ರೈತರಿಗೆ ಕೃಷಿ ಉದ್ಯಮ ಸಂಸ್ಥೆಗಳು, ಸಗಟು ವ್ಯಾಪಾರಿಗಳು, ರಫ್ತುದಾರರು, ಚಿಲ್ಲರೆ ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸಲು ಸಹಾಯವಾಗಲಿದೆ. ಅಲ್ಲದೆ, ರೈತರಿಗೆ ಭದ್ರತೆ ಹಾಗೂ ಪ್ರೋತ್ಸಾಹ ನೀಡಲು ಕೃಷಿ ಒಪ್ಪಂದಗಳ ಕುರಿತು ರಾಷ್ಟ್ರೀಯ ಚೌಕಟ್ಟು ನಿರ್ಮಿಸುವ ಗುರಿ ಹೊಂದಿದೆ. ಎರಡು ಮಸೂದೆಗಳು ದೇಶದ ಕೃಷಿ ವಲಯದಲ್ಲಿ ಕ್ರಾಂತಿ ತರಲಿವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಸ್ಪಷ್ಟಪಡಿಸಿದ್ದಾರೆ.

ದೇಶದ ಶೇ.86ರಷ್ಟು ಸಣ್ಣ ವರ್ಗದ ರೈತರಿದ್ದು, ಇವರಿಗೂ ಸಹ ಯಾವುದೇ ಕಾಯ್ದೆಯ ಮೂಲಕ ತಾವು ಬೆಳೆದ ಬೆಳೆಯ ನ್ಯಾಯಯುತ ದರದ ಬಗ್ಗೆ ಮುಂಚಿತವಾಗಿ ಮಾಹಿತಿ ದೊರೆತು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ. ಹೀಗಾಗಿ ಕೇಂದ್ರದ ಕೃಷಿ ಮಸೂದೆ ರೈತರ ಸಮುದಾಯಕ್ಕೆ ಮಾರಕವಲ್ಲ ಎಂದು ಎಂ.ಬಿ. ಝಿರಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಬಿಜೆಪಿ ನಗರ ಘಟಕ ಅಧ್ಯಕ್ಷ ಶಶಿಕಾಂತ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಮುರುೇಂದ್ರಗೌಡ ಪಾಟೀಲ, ರಾಜು ಚಿಕ್ಕನಗೌಡರ, ಎಫ್.ಎಸ್. ಸಿದ್ಧನಗೌಡರ ಮತ್ತಿತರರು ಉಪಸ್ಥಿತರಿದ್ದರು.

ಕೃಷಿ ಉತ್ಪನ್ನ ವ್ಯಾಪಾರಕ್ಕೆ ಉತ್ತೇಜನ: ಪ್ರಸಕ್ತ ಕೇಂದ್ರ ಮುಂಗಾರು ಅಧಿವೇಶನದಲ್ಲಿ ಮಂಡನೆಯಾದ ಕೃಷಿ ಮಸೂದೆಯಿಂದೆ ರೈತರು ಹಾಗೂ ವ್ಯಾಪಾರಿಗಳಿಗೆ ತಮಗೆ ಇಷ್ಟ ಬಂದ ಕಡೆ ಕೃಷಿ ಉತ್ಪನ್ನ ಮಾರಾಟ ಮತ್ತು ಖರೀದಿ ಮಾಡುವ ಸ್ವಾತಂತ್ರ್ಯ ನೀಡಲಾಗಿದೆ. ಪರ್ಯಾಯ ವ್ಯಾಪಾರ ವ್ಯವಸ್ಥೆ ಮೂಲಕ ಬೆಳೆಗಳಿಗೆ ನ್ಯಾಯಯುತ ದರ ನಿಗದಿ ಪಡಿಸಲು ನೆರವು ನೀಡಲಾಗಿದೆ. ಕೃಷಿ ಉತ್ಪನ್ನಗಳ ಪಾರದರ್ಶಕತೆ, ತಡೆರಹಿತ ಅಂತಾರಾಜ್ಯ ಹಾಗೂ ರಾಜ್ಯದೊಳಗಿನ ವ್ಯಾಪಾರಕ್ಕೆ ಉತ್ತೇಜನ ನೀಡಲಾಗಿದೆ. ಕೃಷಿ ಉತ್ಪನ್ನಗಳ ಆನ್‌ಲೈನ್ ವ್ಯಾಪಾರಕ್ಕೆ ಒತ್ತು ನೀಡಲು ಕಾನೂನಾತ್ಮಕ ಚೌಕಟ್ಟು ಅಳವಡಿಸಲಾಗಿದೆ ಎಂದು ಎಂ.ಬಿ. ಝಿರಲಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net