ರಾಜ್ಯದಲ್ಲಿ ತಾಂಡವವಾಡುತ್ತಿರುವ ಹರಾಜಕತೆ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕೆ

BJP complains to Child Commission against Rahul Gandhi mandya
Published on

ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ಹರಾಜಕತೆ ತಾಂಡವವಾಡುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಕರ್ತನನ್ನು ರಕ್ಷಣೆ ಮಾಡಿದ್ದಾರೆಂಬ ಕ್ಷುಲ್ಲಕ ಕಾರಣಕ್ಕೆ ಶಾಸಕರನ್ನು ಬಂಧಿಸಲು ಹತ್ತಾರು ಪೊಲೀಸರನ್ನು ಸರ್ಕಾರ ಕಳುಹಿಸುತ್ತದೆ. ಮತ್ತೊಂದೆಡೆ ಚನ್ನಗಿರಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಮತಾಂಧರ ಪರ ನಿಲ್ಲುತ್ತಾ ಪೊಲೀಸ್ ಅಧಿಕಾರಿಗಳನ್ನೇ ಅಮಾನತು ಮಾಡುತ್ತಿದ್ದು, ಇದು ಯಾವ ನೀತಿ. ಪೊಲೀಸರನ್ನು ತಮ್ಮ ಕೈಗೊಂಬೆ ಮಾಡಿಕೊಂಡು ಆಟ ಆಡಿಸುತ್ತಿರುವ ಪರಿಣಾಮ ಕಾನೂನು ಮತಾಂಧರ ತಾಳಕ್ಕೆ ಕುಣಿಯುತ್ತಿದೆ. ಹೀಗಾಗಿ ಯುವತಿಯರ ಮೇಲೆ ಅತ್ಯಾಚಾರ, ಕೊಲೆ, ಹಲ್ಲೆ ನಡೆಯುತ್ತಿದೆ. ಭಯೋತ್ಪಾದನೆ, ಕೋಮುಗಲಭೆಗಳು ರಾಜ್ಯದಲ್ಲಿ ರಾರಾಜಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಕೈಗೆ ಅಧಿಕಾರ ಕೊಟ್ಟರೆ ರೌಡಿಗಳ ಕೈಯಲ್ಲಿ ಮಚ್ಚು ಲಾಂಗು, ಉಗ್ರರ ಕೈಯಲ್ಲಿ ಬಾಂಬು ಕೊಟ್ಟಂತೆ. ಶಾಂತಿ, ಸುವ್ಯವಸ್ಥೆ, ಕಾನೂನು ಪರಿಪಾಲನೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ಕಾಂಗ್ರೆಸ್ ನೇತೃತ್ವದ ಆಡಳಿತದಲ್ಲಿ ಅಕ್ಷರಶಃ ರೌಡಿ ರಾಜ್ಯವಾಗಿ ಮಾರ್ಪಟ್ಟಿದೆ. ಚನ್ನಗಿರಿಯಲ್ಲಿ ಪೊಲೀಸ್ ಠಾಣೆ ಧ್ವಂಸ ಮಾಡಿರುವ ಘಟನೆ, ಉಡುಪಿಯಲ್ಲಿ ನಡು ರಸ್ತೆಯಲ್ಲೇ ಗ್ಯಾಂಗ್ ವಾರ್ ನಡೆದಿರುವ ಘಟನೆ ಇವೆಲ್ಲ ರಾಜ್ಯದಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಹತ್ಯೆ, ಅತ್ಯಾಚಾರ, ಗ್ಯಾಂಗ್‌ವಾರ್, ಗಾಂಜಾ ಮಾರಾಟ ದಂಧೆ, ರೇವ್ ಪಾರ್ಟಿ, ಕೋಮು ಗಲಭೆ, ಗಲಾಟೆಗಳಿಂದ ಕರ್ನಾಟಕದ ಗೌರವ ಮಣ್ಣುಪಾಲಗುತ್ತಿದೆ. ನಿಮ್ಮ ಕೈಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕನ್ನಡಿಗರು ನೆಮ್ಮದಿಯಿಂದ ಬದುಕಲು ಬಿಡಿ. ರಾಜ್ಯದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಪ್ರಕರಣದಲ್ಲಿ ಬಂಧಿಯಾಗುತ್ತಿರುವ ಭಯೋತ್ಪಾದಕ ಶಕ್ತಿಗಳು ಈ ಘಟನೆಗಳ ಹಿಂದಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕಲ್ಪಿಸಬೇಕಾದ ಪೊಲೀಸರು ಹಾಗೂ ಪೊಲೀಸ್ ಠಾಣೆಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಉದ್ಭವಿಸಿದೆ ಎಂದರೆ ಪರಿಸ್ಥಿತಿ ಯಾವ ಹಂತ ತಲುಪುತ್ತಿದೆ ಎಂದು ಅಂದಾಜಿಸಬಹುದಾಗಿದೆ. ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ. ಅಂತೆಯೇ ಪೊಲೀಸ್ ಠಾಣೆಗಳಿಗೆ ದಾಳಿ ಮಾಡುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸರಿ ದಾರಿಗೆ ಬರಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net