

ಮಂಗಳೂರು: ರಾಜ್ಯದಲ್ಲಿ ಬಿಜೆಪಿಯು ಆಂತರಿಕ ಸಮಸ್ಯೆಯಿಂದ ಅವನತಿಯ ಹಾದಿಯಲ್ಲಿದೆ. ಇದೇ ಕಾರಣಕ್ಕೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕನ್ನು ಆರಿಸಲಾಗದ ಸ್ಥಿತಿಗೆ ತಲುಪಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಹೇಳಿದ್ದಾರೆ.
ನಗರದ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್ ತಮ್ಮ ಸೋಲಿಗೆ ಬಿಜೆಪಿಯವರೇ ಕಾರಣ ಎನ್ನುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರೂ ಟೀಕಿಸಿದ್ದಾರೆ. ನಳಿನ್ ಕುಮಾರ್ ಕಟೀಲು ಬಿಜೆಪಿ ರಾಜ್ಯಾಧ್ಯಕ್ಷತೆಯ ಅವಧಿ ಪೂರ್ಣಗೊಂಡು ಈಗ ಅವಧಿ ಮೀರಿದ ಔಷಧಿಯ ರೀತಿಯಲ್ಲಿ ಬಿಜೆಪಿಯಲ್ಲಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿಗೆ ಶರಣಾಗಿದ್ದಾರೆ. ಈ ರೀತಿ ಬಿಜೆಪಿ ರಾಜ್ಯದಲ್ಲಿ ಅವನತಿಯ ಹಾದಿಯಲ್ಲಿದೆ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲು ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸಲಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬಿಬಿಎಂಪಿ, ಜಿ.ಪಂ, ತಾ.ಪಂ ಚುನಾವಣೆಗೆ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದರು.
ವೆನ್ಲಾಕ್ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಟೀಕೆ ಮಾಡುವ ಸ್ಥಳೀಯ ಶಾಸಕರು ತಮ್ಮ ಹೊಣೆಗಾರಿಕೆ ಮರೆತು ಮಾತನಾಡುತ್ತಿದ್ದಾರೆ ಎಂದು ಐವನ್ ಡಿಸೋಜ ಟೀಕಿಸಿದ್ದಾರೆ.
ಮನಪಾ ಸದಸ್ಯ ಪ್ರವೀಣ್‌ಚಂದ್ರ ಆಳ್ವ, ಮುಖಂಡರಾದ ಭಾಸ್ಕರ ರಾವ್, ಶೇಷಮ್ಮ, ವಿಕಾಸ್ ಶೆಟ್ಟಿ, ಅಬ್ದುಲ್ ಸಲೀಂ, ಚೇತನ್ ಕುಮಾರ್ ಮೊದಲಾದವರಿದ್ದರು.
ಸಿಎಂ ಪರಿಹಾರ ನಿಧಿ 9.25 ಲಕ್ಷ ರೂ. ಬಿಡುಗಡೆ
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 9.25 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಲಾಗಿದೆ. ಇತ್ತೀಚೆಗೆ ಅಳಪೆ ಗ್ರಾಮದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ವರುಣ್ ಮತ್ತು ವೀಕ್ಷಿತ್ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಅನಾರೋಗ್ಯದಿಂದ ಸಂಕಷ್ಟಕ್ಕೀಡಾದ 11 ಕುಟುಂಬಗಳ ಸದಸ್ಯರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಒಟ್ಟು 9.25 ಲಕ್ಷ್ಷ ರೂ. ಮಂಜೂರು ಮಾಡಿ ಸಂತ್ರಸ್ತರಿಗೆ ನೆರವು ನೀಡಿದ್ದಾರೆ ಎಂದು ಐವನ್ ಡಿಸೋಜ ಹೇಳಿದರು.