ಸರ್ವಮತ ಬಿಜೆಪಿ ಗುರಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿಕೆ

santosh
Published on

ಮಂಗಳೂರು: ಜನಪರ ಅಡಳಿತ, ದೇಶದ ವಿಕಾಸದೊಂದಿಗೆ ಸರ್ವಮತ ಬಿಜೆಪಿಯ ಗುರಿ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ಮಂಗಳೂರಿನಲ್ಲಿ ಶನಿವಾರ ಬಿಜೆಪಿ ರಾಜ್ಯ ಪ್ರಕೋಷ್ಠಗಳ ಚಿಂತನಾ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,

ಬಿಜೆಪಿಯನ್ನು ಸರ್ವಸ್ಪರ್ಶಿಯಾಗಿ ಬೆಳೆಸುವ ಉದ್ದೇಶದಿಂದ ಪಕ್ಷದ ವಿವಿಧ ಮೋರ್ಚಾಗಳ ಜತೆ ಪ್ರತ್ಯೇಕ ಪ್ರಕೋಷ್ಠಗಳನ್ನು ರಚಿಸಲಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಪ್ರಕೋಷ್ಠಗಳು ಸಮರ್ಥವಾಗಿವೆ. ಪಕ್ಷ ಕೇವಲ ಬಹುಮತ ಪಡೆದರೆ ಸಾಲದು. ರಾಜ್ಯದಲ್ಲಿ ಬಹುಮತ ಇದ್ದರೂ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ. ಕರಾವಳಿಯಲ್ಲಿ ಬಿಜೆಪಿ ಗೆದ್ದರೂ ಉಳ್ಳಾಲದಲ್ಲಿ ಗೆಲುವು ಸಾಧ್ಯವಾಗಿಲ್ಲ. ಅಂತಹ ಕ್ಷೇತ್ರಗಳಲ್ಲೂ ಗೆಲುವು ಸಾಧ್ಯವಾಗಬೇಕಾದರೆ ಸಂಘಟನೆಯ ಶಕ್ತಿಯನ್ನು ಬೂತ್ ಮಟ್ಟಕ್ಕೆ ಕೊಂಡೊಯ್ಯಬೇಕು. ಎಲ್ಲ ಬೂತ್‌ಗಳಲ್ಲಿ ಬಿಜೆಪಿ ರಾಜಕೀಯ ಪ್ರಾಬಲ್ಯ ಸ್ಥಾಪಿಸಬೇಕು ಎಂದರು.

ಕಾಂಗ್ರೆಸ್ ಚಿಂತನೆ ಮುಕ್ತ: ಕಾಂಗ್ರೆಸ್‌ಮುಕ್ತ ಎಂದು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯ ಅರ್ಥ ವಿರೋಧ ಪಕ್ಷ ಮುಕ್ತ ಅಂತ ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಬೇಕು. ಆದರೆ ನೆಲದ ಸಂಸ್ಕೃತಿಯನ್ನು ಗೌರವಿಸದ ಕಾಂಗ್ರೆಸ್‌ನಂತಹ ಪಕ್ಷ ನಮ್ಮ ದೇಶಕ್ಕೆ ಹೊಂದಿಕೆಯಾಗದು. ಅದಕ್ಕಾಗಿ ಕಾಂಗ್ರೆಸ್ ಚಿಂತನೆಯಿಂದ ದೇಶ ಮುಕ್ತವಾಗಬೇಕು ಎಂದರು.

ನಿರ್ಣಾಯಕ ನೇತ್ರತ್ವ: ಸ್ವಾತಂತ್ರೃ ಬಳಿಕ ಕಾಂಗ್ರೆಸ್ ಸರ್ಕಾರ ಇದ್ದರೂ, ಅವರು ಸ್ವಂತದ ಕೆಲಸ ಮಾಡಿ ಸಮಯ ಸಿಕ್ಕಾಗ ಆಡಳಿತ ನಡೆಸಿದರು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ಜನಪ್ರತಿನಿಧಿಗಳು ಉತ್ತಮ ಆಡಳಿತ ನೀಡಲು ಸಮಯ ವಿನಿಯೋಗಿಸುತ್ತಿದ್ದಾರೆ. ವಾಜಪೇಯಿ ಸರ್ವಸಮ್ಮತ ನೇತೃತ್ವ ಹೊಂದಿದ್ದರೆ, ನರೇಂದ್ರ ಮೋದಿ ಅವರದ್ದು ನಿರ್ಣಾಯಕ ನೇತೃತ್ವ. ಇಂತಹ ನಿರ್ದಿಷ್ಟ ರಾಜಕೀಯ ಸಿದ್ಧಾಂತ ಹೊಂದಿರುವುದರಿಂದಲೇ ಭಾರತ ಈಗ ಜಗತ್ತಿನಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಸಂತೋಷ್ ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷರು ಉಪಸ್ಥಿತಿದ್ದರು. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಪ್ರಕೋಷ್ಠಗಳ ಸಂಯೋಜಕ ಭಾನುಪ್ರಕಾಶ್, ಸಹ ಸಂಯೋಜಕ ಶಿವಯೋಗಿ ಸ್ವಾಮಿ, ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಇದ್ದರು.

ಸಿದ್ದರಾಮಯ್ಯರಿಗೆ ಅರ್ಥ ಆಗದು: ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಯಾರಾದರೂ ಬಲಿದಾನ ಮಾಡಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ ಎಂದು ಹೇಳಿದ ಸಂತೋಷ್, ಆ ಸಂದರ್ಭ ಬಿಜೆಪಿ ಹುಟ್ಟಿರಲಿಲ್ಲ ಎನ್ನುವ ಜ್ಞಾನವೂ ಅವರಿಗಿಲ್ಲ ಎಂದು ಕುಟುಕಿದರು. ಸ್ವಾತಂತ್ರೃಕ್ಕಾಗಿ ಬಲಿದಾನ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಬಲಿದಾನ ಮಾಡುವ ಅವಕಾಶ ಬಂದಾಗ ನಮ್ಮ ಸಂಘಟನೆಯವರು ಮಾಡಿದಷ್ಟು ಬಲಿದಾನ ಬೇರೆ ಯಾರೂ ಮಾಡಿಲ್ಲ. ಈಗ ಗಾಂಧೀಜಿ ಹೆಸರಿನಲ್ಲಿ ಎಲ್ಲ ಕಡೆ ಕಾಂಗ್ರೆಸ್‌ನವರು ಅಂಗಡಿ ತೆರೆದಿದ್ದಾರೆ. ಆದರೆ ಗಾಂಧೀಜಿ ವಿಷಯದಲ್ಲಿ ಅತಿ ಹೆಚ್ಚು ಪಾಪ ಮಾಡಿದವರು ಕಾಂಗ್ರೆಸಿಗರೇ. ಸಿದ್ದರಾಮಯ್ಯ ಅವರಿಗೆ ಇದು ಅರ್ಥ ಆಗುವುದಿಲ್ಲ ಎಂದು ಟೀಕಿಸಿದರು.

ಜಗದೀಶ್ ಶೆಟ್ಟರ್ ಪಕ್ಷದ ವಿಚಾರದಲ್ಲಿ ದೆಹಲಿಗೆ ಹೋಗಿಲ್ಲ. ಹಾಗೆ ಹೋಗಿದ್ದರೆ ಆ ಬಗ್ಗೆ ತನಗೂ ಮಾಹಿತಿ ಸಿಗುತ್ತಿತ್ತು. ಶೆಟ್ಟರ್ ಅವರ ಸ್ವಂತ ಕೆಲಸಕ್ಕೆ ಹೋಗಿರಬಹುದು.

ಬಿ.ಎಲ್.ಸಂತೋಷ್ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ

ಬಿ.ಎಲ್.ಸಂತೋಷ್ ಹೇಳಿದ್ದು....

ರಾಹುಲ್ ಗಾಂಧಿ ಪಾರ್ಟ್ ಟೈಮ್ ರಾಜಕಾರಣಿ. ಅವರಿಗೆ ಬದ್ಧತೆ, ಪ್ರಾಮಾಣಿಕತೆ ಇಲ್ಲ. ಎಲ್ಲಿಯೊ ಕುಳಿತು ಟ್ವೀಟ್ ಮಾಡುತ್ತಾರೆ.

ಪ್ರಧಾನಿ ಮೋದಿ ಅವರನ್ನು ಬೈದರೆ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿ ಬರುತ್ತದೆ ಎನ್ನುವ ಕಾರಣದಿಂದಲೇ ಕಾಂಗ್ರೆಸ್ ನಾಯಕರು ಟೀಕಿಸುತ್ತಿದ್ದಾರೆ. ಆದರೆ ಮೋದಿ ಅವರ ಶೇ.10ರಷ್ಟೂ ಕೆಲಸ ಮಾಡುವ ಯೋಗ್ಯತೆ ಅವರಿಗಿಲ್ಲ.

ಬಿಜೆಪಿ ವಿರುದ್ಧ ಚುನಾವಣೆ ಗೆಲ್ಲುವುದು ಕಷ್ಟ ಅಂತ ಭಾವಿಸಿರುವ ವಿರೋಧ ಪಕ್ಷಗಳು ವಿಭಜನಕಾರಿ ರಾಜಕೀಯದಲ್ಲಿ ತೊಡಗಿದ್ದಾರೆ.

ಬಾಲಿವುಡ್‌ನ ಅನೇಕ ನಟರು ಬಾಯ್ತೆರೆದರೆ ಹಿಂದುತ್ವ ವಿರೋಧವೇ ಮಾತನಾಡುತ್ತಿದ್ದಾರೆ.

ಮತದ ಆಸೆಯಿಂದ ಆರ್‌ಎಸ್‌ಎಸ್ ದೂಷಣೆ ಕೆಲವು ಮುಖಂಡರಿಗೆ ಫ್ಯಾಷನ್ ಆಗಿದೆ. ಚುನಾವಣೆ ಮುಗಿದಾಗ ಅವರಿಗೆ ಆರ್‌ಎಸ್‌ಎಸ್ ಮರೆತು ಹೋಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net