ಮೋದಿ ಆಡಳಿತದಲ್ಲಿ ಭಾರತ ಬಲಿಷ್ಠ: ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್ ಬಣ್ಣನೆ

1 (2)
Published on

ಮಂಡ್ಯ: ಭಾರತ ಅಂತರ್ಗತ, ಪ್ರಗತಿಪರ ಮತ್ತು ಸಮರ್ಥನೀಯ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬದ್ಧತೆಯ ಕೊಡುಗೆ ನೀಡಿದ್ದಾರೆ. ಇದರ ಪರಿಣಾಮ ದೇಶ ಬಲಿಷ್ಠಗೊಂಡಿದ್ದು, ಹಲವು ರಾಷ್ಟ್ರಗಳು ಭಾರತದ ಸ್ನೇಹ ಬೆಳೆಸಲು ಹಾತೊರೆಯುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒಂಭತ್ತು ವರ್ಷಗಳ ಸಾಧನೆ ಸಾರ್ಥಕತೆಯನ್ನು ಮೆರೆದಿದೆ. ಹಿಂದಿನ ಆಡಳಿತದಲ್ಲಿ ದೂರದೃಷ್ಟಿ ಇಲ್ಲದ ಕಾಮಗಾರಿ ಮಾಡಲಾಗುತ್ತಿತ್ತು. ಆದರೆ ನಮೋ ಅವರ ಅತ್ಯುತ್ಸಾಹಿ ನಾಯಕತ್ವದಡಿ ದೇಶದ ಏಳಿಗೆಗಾಗಿ ಹಾಗೂ ಎಲ್ಲ ವರ್ಗದವರಿಗೂ ಮೂಲ ಸೌಕರ್ಯ ಕಲ್ಪಿಸುವ ಕೆಲಸ ವೇಗವಾಗಿ ನಡೆಯುತ್ತಿವೆ ಎಂದು ಬಣ್ಣಿಸಿದರು.

2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ವಿಶ್ವದಲ್ಲಿಯೇ ಭಾರತವನ್ನು ಪ್ರಥಮ ಸ್ಥಾನದಲ್ಲಿರುವಂತೆ ಮಾಡಲು ಶ್ರಮಿಸಿದ್ದಾರೆ. ಆಂತರೀಕ ಭದ್ರತೆ ಹಾಗೂ ಬಾಹ್ಯ ನಿರ್ವಹಣೆ, ಆರ್ಥಿಕ ನಿರ್ವಹಣೆ, ಸಬಲೀಕರಣ ಯೋಜನೆಗಳಿಗೆ ಆದ್ಯತೆ ನೀಡಲಾಗಿತ್ತು. ನಮೋ ಸರ್ಕಾರ ಸವಾಲಿನ ಗುರಿ ನಿಗದಿಪಡಿಸಿ ನಿಗದಿತ ಗಡುವಿನಲ್ಲಿ ಅದನ್ನು ಸಾಧಿಸುತ್ತಾ ಸಾಗಿ ಬಂದಿದೆ. ಇದು ಕೋವಿಡ್ ಲಸಿಕಾಕರಣದ ಅವಧಿಯಲ್ಲೇ ವ್ಯಕ್ತವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುದೀಕರಣ, ಮನೆಮನೆಗೆ ನಲ್ಲಿಗಳಲ್ಲಿ ನೀರು ಕೊಡುವುದು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಧ್ಯವಾಗಿದೆ. ಜನ್‌ಧನ್, ಆಧಾರ್ ಮತ್ತು ಮೊಬೈಲ್ ಪರಸ್ಪರ ಹೊಂದಿ ಮಧ್ಯವರ್ತಿಗಳಿಲ್ಲದೇ ನೇರ ಹಣ ವರ್ಗಾವಣೆಗೆ(ಡಿಬಿಟಿ) ಚಾಲನೆ ಕೊಟ್ಟಿದ್ದಾರೆ ಎಂದು ಹೇಳಿದರು.

ಒಂಭತ್ತು ವರ್ಷಗಳ ಅವಧಿಯಲ್ಲಿ ಎಲ್ಲ ಭಾರತೀಯರನ್ನು ಪ್ರೇರೆಪಿಸುವ ಹಾಗೂ ದೊಡ್ಡ ಕನಸಿನ ಜತೆಗೆ ಆಕಾಂಕ್ಷೆ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಪರಿಣಾಮ ಇಡೀ ವಿಶ್ವವೇ ಭಾರತದ ಅಭಿವೃದ್ಧಿಯತ್ತ ನೋಡುವಂತಾಗಿದೆ. ಜೂ.21 ಅನ್ನು ಅಂತಾರಾಷ್ಟ್ರೀಯ ಯೋಗದಿನವೆಂದು ಘೋಷಿಸಲಾಗಿದೆ. ಇದರಿಂದಾಗಿ ಭಾರತೀಯರಿಗೆ ಜಾಗತಿಕ ಮನ್ನಣೆ ಲಭಿಸುವಂತಾಯಿತು. ಮಾತ್ರವಲ್ಲದೆ ಅಮೃತ್ ಕಾಲದಲ್ಲಿ ಭಾರತ ಏನೇನು ಮಾಡಬಹುದು ಎಂಬ ನೀಲನಕ್ಷೆ ಸಿದ್ಧಗೊಂಡಿದೆ. ಇದು ಮೋದಿ ಅವರ ದೂರದೃಷ್ಟಿಯ ನಾಯಕತ್ವದ ಫಲ. ವಿದೇಶಿ ಮೂಲ ಸೌಕರ್ಯ, ಸಾಮಾಜಿಕ ನ್ಯಾಯದ ನೀತಿಯ ಸಮರ್ಥ ಚಿತ್ರಣ, ಮಹಿಳೆಯರ ಸಬಲೀಕರಣ, ಯುವಕರಿಗೆ ಅವಕಾಶವನ್ನು ನಮೋ ಆಡಳಿತದಲ್ಲಿ ನೀಡಲಾಗಿದೆ ಎಂದರು.

ಪ್ರಧಾನಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಸುಮಾರು 80 ಕೋಟಿ ಜನರು ಉಚಿತವಾಗಿ ಆಹಾರ ಧಾನ್ಯ ಪಡೆಯುತ್ತಿದ್ದಾರೆ. ಸ್ವಚ್ಛ ಭಾರತ ಯೋಜನೆಯಡಿ 11.72 ಕೋಟಿ ಶೌಚಗೃಹ ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರದ ಸಂಪುಟದಲ್ಲಿ ಶೇ.60ರಷ್ಟು ಸಚಿವರು ಎಸ್ಸಿ, ಎಸ್ಟಿ, ಒಬಿಸಿ ಸಮುದಾಯಕ್ಕೆ ಸೇರಿದ್ದಾರೆ. ಕೋವಿಡ್ ಸಮಯದಲ್ಲಿ 20 ಕೋಟಿ ಮಹಿಳೆಯರು ನೇರ ನಗದು ವರ್ಗಾವಣೆ ಪ್ರಯೋಜನ ಪಡೆದಿದ್ದಾರೆ. 2014ರಿಂದ ಹಿಂದೆ ಹೋಲಿಸಿದರೆ ಐದು ಪಟ್ಟು ಹೆಚ್ಚು ಏಕಲವ್ಯ ವಸತಿ ಶಾಲೆ ಮಂಜೂರು ಮಾಡಲಾಗಿದೆ. ಪಿಎಂ ಸ್ವನಿಧಿಯಡಿ 34.45 ಲಕ್ಷ ಬೀದಿ ವ್ಯಾಪಾರಿಗಳು ಸಾಲ ಪಡೆದಿದ್ದಾರೆ. ಮುದ್ರಾ ಯೋಜನೆಯಡಿ 39.65 ಕೋಟಿ ರೂ ಸಾಲ ನೀಡಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ವಕ್ತಾರ ನಾಗಾನಂದ, ಪ್ರಧಾನ ಕಾರ್ಯದರ್ಶಿ ಕಾಂತಾರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net