

ಉಡುಪಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲೇಬೇಕು. ತುಕುಡೇ ಗ್ಯಾಂಗ್‌ಗಳು ಈಗಲೂ ಸಕ್ರಿಯವಾಗಿದ್ದು, ಮೋದಿಯನ್ನು ಸೋಲಿಸಲು ಷಡ್ಯಂತ್ರ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ಟೂಲ್ ಕಿಟ್ ಭಾಗವಾಗಿದೆ. ಸುಧಾರಣೆಗಳು ಅನುಭವಕ್ಕೆ ಬರುತ್ತಿರುವ ಕಾಲದಲ್ಲಿ ಮತ್ತೆ ದೇಶ ಹಿಮ್ಮುಖವಾಗಿ ಚಲಿಸಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಗುರುವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಖಾಸಗಿ ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಅಮೃತ ಕಾಲಘಟ್ಟದಲ್ಲಿ ಭಾರತ ವಿಶ್ವಗುರು ಆಗಬೇಕು. ಅಧಿಕಾರ ದಾಹಕ್ಕಾಗಿ ತಾತ್ಕಾಲಿಕ ಆಮಿಷಗಳನ್ನು ನೀಡುವುದರಿಂದ ದೇಶಕ್ಕೆ ಶಾಶ್ವತ ಹಾನಿಯಾಗುತ್ತದೆ. ಸುಧಾರಣೆಗಳು ನಿಧಾನಕ್ಕೆ ಫಲ ಕೊಡುವುದರಿಂದ ಜನರು ಕಾಂಗ್ರೆಸ್ ಮಾಯಾ ಜಾಲದಿಂದ ಹೊರಗಡೆ ಬರಬೇಕು. ಇತಿಹಾಸದಲ್ಲಿ ಮೋದಿಗಿಂತ ಹಿಂದಿನ ಕಾಲ, ಮೋದ ನಂತರದ ಕಾಲ ಚರ್ಚೆ ನಡೆಯಬಹುದು. ಯಾಕೆಂದರೆ ಮೋದಿಯವರು 9 ವರ್ಷಗಳಲ್ಲಿ ದೇಶವನ್ನು ಸ್ಕಾೃಮ್‌ಗಳಿಂದ ಸ್ಕೀಂಗಳ ಕಡೆಗೆ ಕೊಂಡೊಯ್ದಿದ್ದಾರೆ. ಜಾತಿ ಧರ್ಮ ಕೇಳದೆ ಯೋಜನೆಗಳನ್ನು ತಲುಪಿಸಿದ್ದಾರೆ. ಅಭಿವೃದ್ಧಿ ಜೊತೆಗೆ ಸಾಂಸ್ಕೃತಿಕ ಪುನರುತ್ಥಾನ ಕಾರ್ಯವನ್ನೂ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಔರಂಗಜೇಬ್ ಮಾನಸಿಕ ಸ್ಥಿತಿ
ಅಧಿಕಾರಕ್ಕೆ ಬಂದ ತಕ್ಷಣ ಬೆಲೆ ಏರಿಕೆ ಮಾಡಿರುವ ಕಾಂಗ್ರೆಸ್ ಔರಂಗಜೇಬ್ ಮಾನಸಿಕ ಸ್ಥಿತಿ ಹೊಂದಿದೆ. ಆತ ಜಿಜಿಯಾ ಹೇರಿದ್ದ, ಬಲವಂತದ ಮತಾಂತರ ಮಾಡಿದ್ದ. ಆತ ಸತ್ತಿದ್ದರೂ ಅವರ ವಿಚಾರಧಾರೆಯನ್ನು ಕಾಂಗ್ರೆಸ್ ಜೀವಂತ ಇರಿಸಿದೆ. ಬಲಾತ್ಕಾರದ ಮತಾಂತರ ಪರವಾಗಿದೆ. ಹೀಗಾಗಿ ನಾವು ಛತ್ರಪತಿ ಶಿವಾಜಿಗಳಾಗಬೇಕು. ಲೋಕಸಭಾ ಚುನಾವಣೆಗೆ ಸಾವಿರಾರು ಸಂಖ್ಯೆಯಲ್ಲಿ ವಿಸ್ತಾರಕರಾಗಿ ಹೊರಡಬೇಕು ಎಂದರು.
ಸಮಾನ ನಾಗರಿಕ ಸಂಹಿತೆ ಜಾರಿಗೆ ವಿರೋಧ ಸಲ್ಲ
ಅಂಬೇಡ್ಕರ್ ಅವರು ಸಂವಿಧಾನದಲ್ಲೇ ಸಮಾನ ನಾಗರಿಕ ಸಂಹಿತೆ ಬಗ್ಗೆ ಉಲ್ಲೇಖಿಸಿದ್ದಾರೆ. ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಸಮಾನರು. ಆದರೆ ಜಿನ್ನಾ ಮಾನಸಿಕತೆಯವರು ಇದನ್ನು ವಿರೋಧಿಸುತ್ತಾರೆ. ಪ್ರತ್ಯೇಕ ಇರಬೇಕು ಅನ್ನೋರಿಗೆ ಬೇರೆ ದೇಶವನ್ನೇ ಕೊಟ್ಟಿದ್ದೇವೆ. ಸಮಾನ ನಾಗರಿಕ ಸಂಹಿತೆ ವಿರೋಧಿಸುವವರು ಅಲ್ಲಿಗೆ ಹೋಗಬಹುದು ಎಂದರು.
ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆ ಮಾಡುವಂತೆ ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳು ಕೇಳಿಲ್ಲ. ಆದರೂ ಕಾಂಗ್ರೆಸ್ ಸರ್ಕಾರ ಕೆಲವರ ಪಠ್ಯಗಳನ್ನು ಕೈಬಿಡುತ್ತಿದೆ. ಚಕ್ರವರ್ತಿ ಹಾಗೂ ಹೆಡಗೇವಾರ್ ಪಠ್ಯದಲ್ಲಿ ಮಕ್ಕಳಿಗೆ ಕಲಿಸಬಾರದ ಅಂಶಗಳಿಲ್ಲ. ಆದರೆ ಈ ಪಠ್ಯಗಳನ್ನು ಬರೆದವರು ಕಾಂಗ್ರೆಸ್‌ಗೆ ಅಪಥ್ಯವಾಗಿದ್ದಾರೆ. ಅದಕ್ಕೆ ಬದಲಾವಣೆ ಮಾಡುತ್ತಿದೆ ಎಂದರು.
ಪಾಲಕರು ಓದಿಸಿ
ನಮ್ಮ ಸರ್ಕಾರದ ಜಾರಿಗೆ ತಂದಿರುವ ಪಠ್ಯಪುಸ್ತಕಗಳು ಮುದ್ರಣವಾಗಿ ಈಗಾಗಲೇ ಮನೆಮನೆಗೆ ತಲುಪಿದೆ. ಹೀಗಾಗಿ ಪಾಲಕರು ಮನೆಯಲ್ಲೇ ಮಗುವಿಗೆ ಪಾಠಗಳನ್ನು ಹೇಳಿಕೊಡಿ. ಕಾಂಗ್ರೆಸ್ ಇವರ ಹೆಸರನ್ನು ಪಠ್ಯದಿಂದ ತೆಗೆಯಬಹುದು. ಆದರೆ ಜನರ ಮನಸ್ಸಿನಿಂದ ತೆಗೆಯಲು ಸಾಧ್ಯವಿಲ್ಲ ಎಂದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲೆಯ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಯಶ್ಪಾಲ್ ಎ. ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಮಾಜಿ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಕುತ್ಯಾರು ನವೀನ್ ಶೆಟ್ಟಿ, ದಿನಕರ ಬಾಬು, ಶಿಲ್ಪಾ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು.