

ಬಂಕಾಪುರ: ಬಿಜೆಪಿ ರೈತ ಮೋರ್ಚಾ ಜಿಲ್ಲಾ ಮತ್ತು ತಾಲೂಕು ಘಟಕದ ತಂಡದಿಂದ ತಾಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರ ಮತ್ತು ಗುರುವಾರ ಭೇಟಿ ನೀಡಿ, ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ನಡೆಸಲಾಯಿತು.
ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ್ ಮಾತನಾಡಿ, ಶಿಗ್ಗಾಂವಿ ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಮೆಕ್ಕೆಜೋಳ, ಸೋಯಾಬೀನ್ ಮತ್ತು ಹತ್ತಿ ಬೆಳೆ ಸಂಪೂರ್ಣ ಹಾನಿಯಾಗಿದೆ. ತಾಲೂಕಿನಲ್ಲಿ 24 ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾದ ಮೆಕ್ಕೆಜೋಳದಲ್ಲಿ ಶೇ. 60ರಷ್ಟು ಬೆಳೆ ಹಾನಿಯಾಗಿದೆ. ಅಲ್ಪಸ್ವಲ್ಪ ಉಳಿದ ಮೆಕ್ಕೆಜೋಳದ ತೆನೆ ಗಾತ್ರ ಸಣ್ಣದಾಗಿದೆ. ಇದರಿಂದ ಬೆಳೆ ಕಟಾವು ಮಾಡಿ ಮಾರಾಟ ಮಾಡಿದರೂ ಬಿತ್ತಿದ ಬೀಜ, ಗೊಬ್ಬರ ಮತ್ತು ಕೂಲಿ ಕಾರ್ವಿುಕರ ಹಣ ಹೊಂದಿಸಲು ಆಗದಂತಹ ಪರಿಸ್ಥಿತಿ ಇದೆ. ಹತ್ತಿ, ಸೋಯಾಬಿನ್, ಶೇಂಗಾ ಬೆಳೆ ಕೂಡ ಹಾನಿಯಾಗಿವೆ ಎಂದರು.
ಸರ್ಕಾರದ ಬೆಳೆ ಹಾನಿ ಸರ್ವೆ ಕಾರ್ಯ ವಿಳಂಬವಾಗಿದೆ. ಹೆಚ್ಚು ಹಾನಿ ದಾಖಲಿಸದಂತೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ ಎನ್ನುವ ಮಾತು ಕೇಳಿಬರುತ್ತಿವೆ. ಅಧಿಕಾರಿಗಳೂ ಅತಿ ಕಡಿಮೆ ಹಾನಿಯಾಗಿದೆ ಎಂದು ನಮೂದು ಮಾಡುತ್ತಿದ್ದಾರೆ. ಹೀಗಾಗಿ, ರೈತರಿಗೆ ಬೆಳೆ ವಿಮೆ, ಪರಿಹಾರ ಹಣ ಬರುವವರೆಗೆ ಕಾಯುವುದಕ್ಕೆ ಆಗುವುದಿಲ್ಲ. ರೈತರು ಆತ್ಮಹತ್ಯೆಯ ದಾರಿ ಹಿಡಿಯುವ ಮೊದಲು ಸರ್ಕಾರ ರೈತರಿಗೆ ಮಧ್ಯಂತರ ಬೆಳೆ ಹಾನಿ ಪರಿಹಾರ ನೀಡಬೇಕು. ಈಗಾಗಲೇ ಹಾನಿಯಾಗಿರುವ ಬೆಳೆ ಹರಗಿ ಬೇರೆ ಬೆಳೆ ಬೆಳೆಯಲು ಬೀಜ, ಗೊಬ್ಬರಕ್ಕೆ ಹಣ ಇಲ್ಲದಂತಹ ಪರಿಸ್ಥಿತಿ ಇದೆ. ಸರ್ಕಾರ ಕೂಡಲೇ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಪಂ ಮಾಜಿ ಅಧ್ಯಕ್ಷ ಶಶಿಧರ ಹೊನ್ನನ್ನವರ, ತಾಲೂಕು ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ಶಂಭಣ್ಣ ಕಡಕೋಳ, ಕಾಶಿನಾಥ ಕಳ್ಳಿಮನಿ, ಷಣ್ಮುಖ ಕಾಳನ್ನವರ, ಬಸವಣ್ಣೆಪ್ಪ ಗುಳೆದಕೇರಿ, ಬಸವರಾಜ ಕುರಗೋಡಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.