

ಕಲಘಟಗಿ: ಪಟ್ಟಣ ಪಂಚಾಯಿತಿಯ ಅಧಿಕಾರ ಬಿಜೆಪಿ ಪಾಲಾಗಿದೆ. ನೂತನ ಅಧ್ಯಕ್ಷರಾಗಿ ಶಿಲ್ಪಾ ವಿನಾಯಕ ಪಾಲ್ಕರ, ಉಪಾಧ್ಯಕ್ಷರಾಗಿ ಗಂಗಾಧರ ತಿಪ್ಪಣ್ಣಗೌಳಿ ಶುಕ್ರವಾರ ಆಯ್ಕೆಯಾದರು. ಕಳೆದ ಒಂದೂವರೆ ವರ್ಷದಿಂದ ಖಾಲಿ ಉಳಿದಿದ್ದ ಪ್ರಮುಖ ಹುದ್ದೆಗಳ ಭರ್ತಿಯಾಗಿದ್ದರಿಂದ ಪಪಂ ಆಡಳಿತಕ್ಕೆ ವಿಶಿಷ್ಟ ಕಳೆ ಬಂದಿದೆ.
ಶಿಲ್ಪಾ ವಿನಾಯಕ ಪಾಲ್ಕರ ಹಾಗೂ ಗಂಗಾಧರ ತಿಪ್ಪಣ್ಣಗೌಳಿ ಅವರು ತಲಾ 11 ಮತಗಳನ್ನು ಪಡೆದು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಗೆಲುವಿನ ನಗೆ ಬೀರಿದರು. ಅಧ್ಯಕ್ಷ ಸ್ಥಾನ ಬಯಸಿ ಕಣಕ್ಕಿಳಿದಿದ್ದ ಜೆಡಿಎಸ್‌ನ ಶಕುಂತಲಾ ಬೋಳಾರ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ವೃಷಬೇಂದ್ರ ಪಟ್ಟಣಶೆಟ್ಟಿ ತಲಾ ಐದು ಮತ ಪಡೆದು ಹಿನ್ನಡೆ ಅನುಭವಿಸಿದರು.
ತಹಸೀಲ್ದಾರ್ ವೀರೇಶ ಮುಳುಗುಂದಮಠ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಆಯ್ಕೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಬಿಜೆಪಿ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕು ಅಧ್ಯಕ್ಷ ಬಸವರಾಜ ಶೆರೆವಾಡ, ಶಶಿಧರ ನಿಂಬಣ್ಣವರ, ಐ.ಸಿ. ಗೋಕುಲ, ಫಕೀರೇಶ ನೇಸರೇಕರ, ಅಣ್ಣಪ್ಪ ಓಲೇಕಾರ, ಮಹಾಂತೇಶ ತಹಸೀಲ್ದಾರ, ಸದಾನಂದ ಚಿಂತಾಮಣಿ, ಮದನ ಪಾಟೀಲ, ಬಸವರಾಜ ಹೊನ್ನಳ್ಳಿ, ಸುರೇಶ ಶೀಲವಂತರ, ಬಸವರಾಜ ಮಾದರ, ಶ್ರೀಧರ ದ್ಯಾವಪ್ಪನವರ, ಪ್ರಮೋದ ಪಾಲ್ಕರ, ಪರಶುರಾಮ ಹುಲಿಹೊಂಡ, ಚಂದ್ರಗೌಡ ಪಾಟೀಲ, ಪುಂಡಲೀಕ ಜಾಧವ, ವಿನಾಯಕ ಗೌಳಿ, ಗಣೇಶ ವಾಲಿಕಾರ ಇತರರಿದ್ದರು.