

ಪುತ್ತೂರು: ದಕ್ಷಿಣ ಕನ್ನಡದಲ್ಲಿ ರಾಷ್ಟ್ರೀಯತೆಯ ಬಗ್ಗೆ ಒಲವು ಹೊಂದಿದ ವ್ಯಕ್ತಿಗಳಿದ್ದು, ನಿರಂತರವಾಗಿ ಬಿಜೆಪಿಗೆ ಹೆಚ್ಚಿನ ಬೆಂಬಲ ನೀಡುವ ಜಾಗವಾಗಿದೆ. ಬಿಜೆಪಿ ಎಲ್ಲಾ ಕಡೆ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ೯ ವರ್ಷ ಸೈನಿಕರಾಗಿ ಕೆಲಸ ನಿರ್ವಹಿಸಿದ ಅಭ್ಯರ್ಥಿ ಜಿಲ್ಲೆಗೆ ಲಭಿಸಿದ್ದಾರೆ. ನಾಯಕತ್ವವನ್ನು ನೀಡುವ ಜಿಲ್ಲೆಯಾಗಿದ್ದು, ಪ್ರತಿಯೊಂದು ಮತವೂ ಪ್ರಧಾನಿ ಮೋದಿಗೆ ಬೆಂಬಲ ಕೊಡುವಂತಾಗಿದೆ. ೪೦೦ಕ್ಕೂ ಅಧಿಕ ಸೀಟ್ ಸಿಗಬೇಕೆಂಬ ನಿಟ್ಟಿನಲ್ಲಿ ಬಿಸಿಲನ್ನೂ ಲೆಕ್ಕಿಸದೆ ರ್‍ಯಾಲಿ ನಡೆಸುತ್ತಿದ್ದೇವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.
ಲೋಕಸಭಾ ಚುನಾವಣೆಯಯಲ್ಲಿ ಬಿಜೆಪಿ ಸ್ಟಾರ್ ಪ್ರಚಾರಕರಾಗಿರುವ ಅಣ್ಣಾಮಲೈ ಅವರು ಅಭ್ಯರ್ಥಿ ಬ್ರಿಜೇಶ್ ಚೌಟ ಪರ ಮಂಗಳವಾರ ಪುತ್ತೂರಿನಲ್ಲಿ ಬೃಹತ್ ರೋಡ್ ಶೋ ಮೂಲಕ ಪ್ರಚಾರ ನಡೆಸಿ ಬಳಿಕ ಸರಕಾರಿ ಬಸ್ ನಿಲ್ದಾಣದ ಬಳಿ ಮತದಾರನ್ನು ಉದ್ದೇಶಿಸಿ ಮಾತನಾಡಿದರು.
ಮೊದಲ ಹಂತದ ಮತದಾನದಲ್ಲಿ ಜನರು ಕಡಿಮೆ ಮತಚಲಾವಣೆ ಮಾಡಿದ್ದು, ಜಿಲ್ಲೆಯಲ್ಲಿ ಶೇ.೮೫ರಷ್ಟು ಮತಚಲಾಯಿಸುವ ಮೂಲಕ ದಾಖಲೆಯ ಮತವನ್ನು ಅಭ್ಯರ್ಥಿ ಪಡೆಯುವ ಕಾರ್ಯವಾಗಬೇಕು. ಕೇಂದ್ರ ಸರ್ಕಾರ ದೇಶದಲ್ಲಿ ೧೧ ಕೋಟಿ ಟಾಯ್ಲೆಟ್ ನಿರ್ಮಿಸಿಕೊಟ್ಟು ಮಹತ್ವದ ಪ್ರಗತಿಯ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್‌ನವರು ಈಗಲೂ ಚೆಂಬು ಹಿಡಿದು ಯಾಕೆ ಹೋಗುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಘೋಷಿಸುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೇ ಗ್ಯಾರಂಟಿ ಇಲ್ಲ. ವ್ಯಾರಂಟಿ ಇಲ್ಲದೆ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಘೋಷಿಸುತ್ತಿದೆ. ಮೋದಿಯ ಗ್ಯಾರಂಟಿಯ ಮುಂದೆ ಯಾವ ಗ್ಯಾರಂಟಿಯೂ ಇಲ್ಲ ಎಂದು ತಿಳಿಸಿದರು.
ಲೋಕ ಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ ನರೇಂದ್ರ ಮೋದಿಯನ್ನು ಕೆಲ್ಲಿಸುವುದಕ್ಕೋಸ್ಕರ, ಹಿಂದುತ್ವವನ್ನು ಉಳಿಸುವುದಕ್ಕೋಸ್ಕರ, ಜಿಲ್ಲೆಯನ್ನು ಹಿಂದುತ್ವದ ಭದ್ರಕೋಟೆಯಾಗಿ ಉಳಿಸುವುದಕ್ಕೋಸ್ಕರ ಹಿಂದೂ ಸಮಾಜ ಒಟ್ಟಾಗಿ ಬಿಸಿಲನ್ನೂ ಲೆಕ್ಕಿಸದೆ ಉತ್ಸಾಹದಿಂದ ಭಾಗವಹಿಸಿದೆ. ನಾವೆಲ್ಲರೂ ಒಂದಾಗಿ ಒಟ್ಟಾಗಿ ಮೋದಿಯವರನ್ನು ೩ನೇ ಬಾರಿಗೆ ಪ್ರಧಾನಿ ಮಾಡುವ ಸಂಕಲ್ಪಕ್ಕೆ ಶಕ್ತಿಯಾಗಬೇಕಾಗಿದೆ. ರೈತರಿಗೋಸ್ಕರ, ಮಹಿಳೆಯರಿಗೋಸ್ಕರ, ಯುವ ಸಮುದಾಯದ ಭವಿಷ್ಯಕ್ಕೋಸ್ಕರ, ದೇಶದ ಅಖಂಡತೆಗೋಸ್ಕರ ನರೇಂದ್ರ ಮೋದಿಯ ಅಗತ್ಯವಿದೆ. ಮತ್ತೊಂದು ಕಡೆಯಲ್ಲಿ ಹಿಂದುತ್ವವನ್ನು ಸೋಲಿಸಬೇಕು, ನರೇಂದ್ರ ಮೋದಿಯನ್ನು ಸೋಲಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ರಾಷ್ಟ್ರವನ್ನು ಒಡೆದು ಆಳಬೇಕು ಎಂಬವರೆಲ್ಲರೂ ಒಂದಾಗಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಪಿ ಪ್ರಮುಖರಾದ ಸುಲೋಚನಾ ಜಿ.ಕೆ. ಭಟ್, ಅರುಣ್ ಕುಮಾರ್ ಪುತ್ತಿಲ, ಆರ್.ಸಿ. ನಾರಾಯಣ್, ನಿತೀಶ್ ಶಾಂತಿವನ, ತಿಮ್ಮಪ್ಪ ಚನಿಲ, ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನಿವಾಸ ರಾವ್, ಜೆಡಿಎಸ್‌ನ ಪ್ರಭಾಕರ್, ಕೈಲಾಸ್ ಗೌಡ ಮತ್ತಿತರರು ಪಾಲ್ಗೊಂಡರು.