

ಹುಬ್ಬಳ್ಳಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ (ಕೆಯುಡಿ)ವು ಆರ್ಥಿಕ ಸಂಕಷ್ಟ ಎದುರಿಸುತ್ತಿರಲು ಕಳೆದ 4 ವರ್ಷಗಳ ಬಿಜೆಪಿ ಸರ್ಕಾರದ ಆಡಳಿತವೇ ಕಾರಣ ಎಂದು ಶಾಸಕ ಪ್ರಸಾದ ಅಬ್ಬಯ್ಯ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಸಮರ್ಪಕವಾಗಿ ಅನುದಾನ ನೀಡದ ಪರಿಣಾಮ ಕೆಯುಡಿ 216.44 ಕೋಟಿ ರೂ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಆಂತರಿಕ ಆದಾಯ ಮೂಲಗಳಿಂದ ಹಣಕಾಸು ಸ್ಥಿತಿಯನ್ನು ಸರಿದೂಗಿಸಿಕೊಳ್ಳಿ ಎಂದು ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಯುಡಿ ಹೇಳಿತ್ತು. ಕೆಯುಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಈಗ ಪ್ರತಿಭಟನೆ ನಡೆಸುತ್ತಿರುವ ಎಬಿವಿಪಿಯವರು ಕಳೆದ ನಾಲ್ಕು ವರ್ಷಗಳಿಂದ ಮಲಗಿಕೊಂಡಿದ್ದರಾ? ಅವರಿಗೆ ಪರಿಸ್ಥಿತಿ ಏನು ಎಂಬುದು ಕನಿಷ್ಠ ಜ್ಞಾನವು ಇಲ್ಲ ಎಂದು ಟೀಕಿಸಿದರು.
ಕೆಯುಡಿ ಕುಲಪತಿ ಪ್ರೊ. ಗುಡಸಿ ಅವರು ಪೆಟ್ರೋಲ್ ವೆಚ್ಚಕ್ಕೂ ಹಣವಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಅವರು ಬಿಜೆಪಿ ಆಡಳಿತದಲ್ಲಿ ಕಣ್ಣು ಮುಚ್ಚಿಕೊಂಡು ಕುಳಿತಿದ್ದು ಯಾಕೆ? ಬಿಜೆಪಿ ಹಾಗೂ ಎಬಿವಿಪಿಯ ನಿಜವಾದ ಬಣ್ಣ ಈಗ ಗೊತ್ತಾಗುತ್ತಿದೆ ಎಂದರು.
ಶಿಕ್ಷಣದಲ್ಲಿ ಯಾರೂ ರಾಜಕೀಯ ಮಾಡಬಾರದು. ಶೈಕ್ಷಣಿಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಿಂದೆ ಸದನದಲ್ಲೂ ಈ ಬಗ್ಗೆ ಮಾತನಾಡಿದ್ದೆ. ಸರ್ಕಾರದೊಂದಿಗೆ ರ್ಚಚಿಸಿ ಕೂಡಲೇ ಅನುದಾನ ಬಿಡುಗಡೆಗೆ ನಾವು ಕೂಡ ಪ್ರಯತ್ನಿಸುತ್ತೇವೆ. ಆದರೆ, ತಮ್ಮ ಬಿಜಪಿಯ ದುರಾಡಳಿತವನ್ನು ಮರೆಮಾಚಲು ಸುಳ್ಳು ಹೇಳಿಕೊಂಡು ಜನರ ದಾರಿ ತಪ್ಪಿಸುವುದನ್ನು ಮೊದಲು ನಿಲ್ಲಿಸಲಿ ಎಂದು ಅಬ್ಬಯ್ಯ ಕುಟುಕಿದರು.