ರೈತ ಉತ್ಪಾದಕ ಸಂಸ್ಥೆಗಳ ಪ್ರೋತ್ಸಾಹಧನ ಬಿಡುಗಡೆಗೆ ಬಿಜೆಪಿ ಒತ್ತಾಯ

BJP-Strike
Published on

ಕಾರವಾರ: ರೈತ ಉತ್ಪಾದಕ ಸಂಸ್ಥೆಗಳಿಗೆ(ಎಫ್‌ಪಿಒ) ರಾಜ್ಯ ಸರ್ಕಾರ ಪ್ರೋತ್ಸಾಹಧನದ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧಿಕಾರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಮಾಡಿದೆ.
ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ರಾಜು ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು. ರೈತರು ಬೆಳೆಯುವ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ, ಅವರ ಆದಾಯವನ್ನು ಹೆಚ್ಚಿಸುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಯೋಜನೆ ಇದಾಗಿದೆ. 2015 ರಲ್ಲಿ ಮೋದಿ ಅವರು ಯೋಜನೆಯನ್ನು ಘೋಷಿಸಿದರು. 2015 ರಿಂದ 24 ರವರೆಗೆ ನಬಾರ್ಡ್ ಪ್ರಾಯೋಜನೆಯೊಂದಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಜ್ಯದಲ್ಲಿ 710 ರೈತ ಉತ್ಪಾದಕ ಸಂಸ್ಥೆಗಳು ಪ್ರಾರಂಭವಾಗಿದ್ದವು. ಅದಕ್ಕೆ ಪ್ರೋತ್ಸಾಹಧನವಾಗಿ ಬಿಡುಗಡೆಯಾಗಬೇಕಾಗಿದ್ದ 200 ಕೋಟಿ ರೂ.ಗಳಲ್ಲಿ 182 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ. ಅದರ ಜತೆಗೆ ಹಿಂದಿನ ಬಿಜೆಪಿ ರಾಜ್ಯ ಸರ್ಕಾರವು ಅಮೃತ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರಾರಂಭಿಸಲು ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿತ್ತು. ರಾಜ್ಯದಲ್ಲಿ ಒಟ್ಟು 490 ಎಫ್‌ಪಿಒಗಳು ರಚನೆಯಾಗಿದ್ದು, ಅದರ ಒಟ್ಟಾರೆ ಅಂದಾಜು 150 ಕೋಟಿ ಪ್ರೋತ್ಸಾಹಧನದ ಶೇ.12 ರಷ್ಟನ್ನು ಹಿಂದಿನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದೆ.
ಆದರೆ, ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಶೇ.82 ರಷ್ಟು ಬಾಕಿ ಪ್ರೋತ್ಸಾಹಧನದ ಅನುದಾನ ಬಿಡುಗಡೆ ಮಾಡಿಲ್ಲ. ಇದರಿಂದ ರೈತ ಉತ್ಪಾದಕ ಸಂಸ್ಥೆಗಳ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಈ ಉತ್ಪಾದಕ ಸಂಸ್ಥೆಯ ಜತೆ ಜೋಡಿಸಿಕೊಂಡ 10 ಲಕ್ಷ ರೈತರಿಗೆ ಮತ್ತು 12 ಸಾವಿರ ನಿರ್ದೇಶಕರಿಗೆ ಸಮಸ್ಯೆಯಾಗಿದೆ ಎಂದು ಸಮಸ್ಯೆ ವಿವರಿಸಿದರು. ಬಾಕಿ ಅಷ್ಟೂ ಅನುದಾನವನ್ನು ಬಿಡುಗಡೆ ಮಾಡದಿದ್ದಲ್ಲಿ ಶೀಘ್ರ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ರೈತ ಮೋರ್ಚಾರ ಜಿಲ್ಲಾಧ್ಯಕ್ಷ ರಮೇಶ ಎಂ.ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಅಶೋಕ ಮುಂಡಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಶಿವಲಿಂಗಯ್ಯ ಅಲ್ಲಯ್ಯನವರಮಠ,ವಿಷ್ಣುಮೂರ್ತಿ ಹೆಗಡೆ, ಪದಾಽಕಾರಿಗಳಾದ ಬಸಣ್ಣ ಕುರುಬಗಟ್ಟಿ, ಸೋನಪ್ಪ ಸುನಕಾರ, ಗಜೇಂದ್ರ ಜಿ.ನಾಯ್ಕ, ದೇವಿದಾ ಲಿಂಗತಳೇಕರ್, ಈಶ್ವರ ಆರ್.ವಡ್ಲೇಕರ್, ಸಹದೇವ ಮಿರಾಶಿ, ಸುಭಾಷ ಗುನಗಿ, ನಾಗೇಶ ಕುರ್ಡೇಕರ್, ಕಿಶನ್ ಕಾಂಬಳೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net