

ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ರೆಬಲ್ ಟೀಮ್ ಶುಕ್ರವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆಯಿತು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊರತುಪಡಿಸಿ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಚಿವ ಶಿವಾನಂದ ಪಾಟೀಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸವಾಲು ಹಾಕಿರುವ ಬೆನ್ನಲ್ಲೇ ಚಾಮುಂಡಿ ಬೆಟ್ಟಕ್ಕೆ ರೆಬೆಲ್ಸ್ ಟೀಮ್ ಭೇಟಿ ನೀಡಿರುವುದು ಕೂತುಹಲ ಮೂಡಿಸಿದೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಲಿಂಬಾವಳಿ, ಇಂದು ರಮೇಶ್ ಜಾರಕಿಹೊಳಿ ಅವರ ಜನ್ಮದಿನ. ಹೀಗಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿಯ ದರ್ಶನ ಮಾಡಿದ್ದೇವೆ. ರಮೇಶ್ ಜಾರಕಿಹೊಳಿಗೆ ಒಳ್ಳೆಯ ಶಕ್ತಿ ಸಿಗಲಿ. ಮುಂದಿನ ದಿನಗಳಲ್ಲಿ ಉತ್ತಮ ದಿನಗಳು ಬರಲಿ ಎಂದು ಪ್ರಾರ್ಥಿಸಿದ್ದೇವೆ. ತಾಯಿಯ ಆಶೀರ್ವಾದದಿಂದ ದುಷ್ಟ ಶಕ್ತಿಗಳು ನಿರ್ನಾಮ ಆಗಲಿ ಎಂದು ಚಾಮುಂಡೇಶ್ವರಿಯಲ್ಲಿ ಕೇಳಿಕೊಂಡಿದ್ದೇವೆ ಎಂದರು.
ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತನ ಕೊಲೆ ಆಗಿರುವುದನ್ನು ಖಂಡಿಸುತ್ತೇವೆ. ಇಡೀ ರಾಜ್ಯದ ಜನತೆ ಸುಹಾಸ್ ಶೆಟ್ಟಿ ಕುಟುಂಬದ ಜತೆ ಇದೆ. ಇದರ ಬಗ್ಗೆ ಸಮಗ್ರವಾದ ತನಿಖೆ ಆಗಬೇಕು. ಕೊಲೆಯಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಶಾಸಕ ಶಿವಾನಂದ ಪಾಟೀಲ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಆ ವಿಚಾರದ ಕುರಿತು ಯತ್ನಾಳ್ ಅವರನ್ನೇ ಕೇಳಿ ಎಂದರು.
ವಲಸಿಗರ ಬಗ್ಗೆ ನಮ್ಮ ವಾರ್ ರೂಂಗೆ ಮಾಹಿತಿ ನೀಡಿ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಧರ್ಮ ಗುರುತಿಸಿ ಹಿಂದುಗಳನ್ನು ಕೊಂದಿದ್ದಾರೆ. ಈ ಘಟನೆ ದುಃಖಕರವಾದದ್ದು. ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿರೋರು, ಬಾಂಗ್ಲಾದೇಶದಿಂದ ನುಸುಳಿರುವ ನುಸುಳುಕೋರರ ಗುರುತು ಪತ್ತೆ ಹಚ್ಚುವ ಕೆಲಸ ಆಗಿದೆ. ಪಾಕಿಸ್ತಾನ, ಬಾಂಗ್ಲಾ ವಲಸಿಗರು ಅಲ್ಲಲ್ಲಿ ಇದ್ದಾರೆ. ಈಗಾಗಲೇ ನಮ್ಮ ವಾರ್ ರೂಮ್ ಪ್ರಾರಂಭ ಮಾಡಿದ್ದೇವೆ. ನಿತ್ಯ 400ಕ್ಕಿಂತ ಹೆಚ್ಚು ಕರೆಗಳು ಬರುತ್ತಿವೆ. ಹಲವು ಮಾಹಿತಿಗಳನ್ನು ರವಾನೆ ಮಾಡುತ್ತಿದ್ದಾರೆ. ಬೋಗಸ್ ಆಧಾರ್ ಕಾರ್ಡ್ ಸೃಷ್ಟಿ ಮಾಡಿಕೊಂಡು ವಾಸವಿದ್ದಾರೆ. ಯಾರಾದರೂ ವಲಸಿಗರು ಇದ್ದರೆ ವಾರ್ ರೂಮ್ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಲಿ. ಕರ್ನಾಟಕದಲ್ಲಿಯೂ ಕೆಲವರು ಇದ್ದಾರೆ ಎಂಬ ಮಾಹಿತಿ ಇದೆ. ವಲಸಿಗರ ಬಗ್ಗೆ ಮೊ.ಸಂ.9035675734, 8217686764 ಮಾಹಿತಿ ನೀಡಿ ಎಂದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಇತ್ತೀಚಿಗೆ ಕೊಡಗಿನ ವಿನಯ್ ಸೋಮಯ್ಯ ಕಾಂಗ್ರೆಸ್ ಶಾಸಕರ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಂಡರು. ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆಯಾಗಿದೆ. ಕಾಂಗ್ರೆಸ್‌ಗೆ ವೋಟ್ ಹಾಕಿದ್ರೆ ತಾಲಿಬಾನ್ ಸರ್ಕಾರ ಬರುತ್ತೆ ಅಂತಾ ಅಂದೇ ಹೇಳಿದ್ದೆ. ರಾಜ್ಯದಲ್ಲಿ ನಿರಂತರವಾಗಿ ಸರಣಿ ಹತ್ಯೆಗಳು ಆಗಿವೆ. ಸಿದ್ದರಾಮಯ್ಯ ಸರ್ಕಾರ ತೆಗೆಯುವವರೆಗೆ ಇದು ನಿಲ್ಲಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಬ್ರಿಗೆ ಅಷ್ಟೇ ಪ್ರಾಮುಖ್ಯತೆ ಸಿಕ್ಕಿದೆ ಎಂದು ಟೀಕಿಸಿದರು.