

ಮಂಡ್ಯ: ಭತ್ತದ ಕೊಯ್ಲು ಮುಗಿಯುತ್ತಾ ಬಂದಿದ್ದರೂ ಖರೀದಿ ಕೇಂದ್ರ ತೆರೆಯದಿರುವ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ನವೀನ್ ಕುಮಾರ್ ನೇತೃತ್ವದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆಯಲ್ಲಿ ತೆರಳಿ ಧರಣಿ ಕುಳಿತರು. ಅಂತೆಯೇ ರಾಜ್ಯಸರ್ಕಾರ ಹಾಗೂ ಸಚಿವ ಚಲುವರಾಯಸ್ವಾಮಿ ವಿರುದ್ಧ ಘೋಷಣೆ ಕೂಗಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಭತ್ತ ಮತ್ತು ರಾಗಿ ಬೆಳೆ ಕಟಾವು ಅಂತಿಮ ತಲುಪಿದ್ದು, ಸಂಕ್ರಾಂತಿ ವೇಳೆಗೆ ಭತ್ತದ ಕೊಯ್ಲು ಮತ್ತು ಒಕ್ಕಣೆ ಬಹುತೇಕ ಮುಗಿಯುತ್ತದೆ. ಆದರೆ ಈವರೆಗೂ ಭತ್ತ ಖರೀದಿ ಕೇಂದ್ರ ಆರಂಭವಾಗದ ಕಾರಣ ಮುಕ್ತ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ತೀವ್ರ ಕುಸಿತ ಕಂಡಿದೆ. ಅನ್ನದಾತರಿಗೆ ಆಗುತ್ತಿರುವ ಅನ್ಯಾಯವನ್ನು ಇನ್ನೆರಡು ಮೂರು ದಿನಗಳಲ್ಲಿ ಸರಿಪಡಿಸದಿದ್ದರೆ ಜಿಲ್ಲೆಯಲ್ಲಿರುವ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಬೀಗ ಜಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಪ್ಪ ಭತ್ತದ ಬೆಲೆಯು 1,800 ರೂನಿಂದ 1,900 ರೂ., ಸಣ್ಣ ಭತ್ತದ ಬೆಲೆಯು 1,900 ರಿಂದ 2 ಸಾವಿರ ರೂ.ಗೆ ಇಳಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಈ ಹಂಗಾಮಿನಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಯೋಜನೆಯಡಿ(ಎಂಎಸ್‌ಪಿ) 2,425 ರೂ ನಿಗದಿಪಡಿಸಿದೆ. ಪ್ರಸ್ತುತ ದಲ್ಲಾಳಿಗಳು ಖರೀದಿ ಮಾಡುವ ಮೊತ್ತಕ್ಕಿಂತ ಎಂಎಸ್‌ಪಿ ಮೊತ್ತವೇ ಹೆಚ್ಚಾಗಿದೆ. ಆದರೆ, ಬೆಂಬಲ ಬೆಲೆ ಯೋಜನೆಯಡಿ ಇನ್ನೂ ಧಾನ್ಯ ಖರೀದಿ ಕೇಂದ್ರಗಳು ಜಿಲ್ಲೆಯಲ್ಲಿ ಆರಂಭವಾಗದ ಕಾರಣ ಭತ್ತದ ದಲ್ಲಾಳಿಗಳಿಗೆ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಕೂಡಲೇ ಈ ಅನ್ಯಾಯಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ದಲ್ಲಾಳಿಗಳು ಬೆಳೆಗಾರರಿಂದ ಖರೀದಿಸುತ್ತಿರುವ ಭತ್ತದ ತೂಕದಲ್ಲೂ ವ್ಯತ್ಯಾಸವಾಗುತ್ತಿದೆ. 74 ಕಿಲೋ ಹಸಿ ಭತ್ತವನ್ನು 70 ಕಿಲೋಗೆ ಹಾಗೂ ಸ್ವಲ್ಪ ಒಣಗಿರುವ 72 ಕಿಲೋ ಭತ್ತವನ್ನು 70 ಕಿಲೋಗೆ ಪರಿಗಣಿಸುತ್ತಿದ್ದಾರೆ. ಜತೆಗೆ, ಚೀಲದ ತೂಕದ ಲೆಕ್ಕದಲ್ಲಿ 1 ಕಿಲೋವನ್ನು ಕಳೆಯಲಾಗುತ್ತಿದೆ. ಕಾರ್ಮಿಕರ ಅಭಾವದಿಂದ ಭತ್ತದ ಕಟಾವು ಮತ್ತು ಒಕ್ಕಣೆಗಾಗಿ ರೈತರು ಅನಿವಾರ್ಯವಾಗಿ ಯಂತ್ರಗಳನ್ನು ಅವಲಂಬಿಸಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಯಂತ್ರೋಪಕರಣಗಳ ಮಾಲೀಕರು ಮತ್ತು ಮಧ್ಯವರ್ತಿಗಳು ಭತ್ತ ಕಟಾವು ಮತ್ತು ಒಕ್ಕಣೆಗಾಗಿ ದುಬಾರಿ ದರ ವಿಧಿಸುತ್ತಿದ್ದಾರೆ. ಸರ್ಕಾರ ಕೂಡಲೇ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಪ್ರತಿ ಕ್ವಿಂಟಾಲ್‌ಗೆ ಎಂಎಸ್‌ಪಿ ದರದ ಜತೆಗೆ 800 ರೂ ಪ್ರೋತ್ಸಾಹ ಧನ ನೀಡಬೇಕು. ಪ್ರತಿ ಕ್ವಿಂಟಾಲ್‌ಗೆ 3 ಸಾವಿರ ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ಅಕಾಲಿಕ ಮಳೆಯಿಂದ ಭತ್ತದ ಬೆಳೆ ನಷ್ಟಕ್ಕೊಳಗಾಗಿರುವ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು. ಬಿಸಿಲಿನ ಅಭಾವದಿಂದ ಭತ್ತವನ್ನು ಒಣಗಿಸಲು ಕಷ್ಟವಾಗುತ್ತಿದೆ. ಹೀಗಾಗಿ ಖರೀದಿ ನಂತರ ಉಗ್ರಾಣಗಳಲ್ಲಿ ಬಿಸಿ ಗಾಳಿಯ ಮೂಲಕ ಭತ್ತವನ್ನು ಒಣಗಿಸಿ ರಕ್ಷಿಸುವ ಪ್ರಕ್ರಿಯೆಯನ್ನು ಖರೀದಿ ಏಜೆನ್ಸಿಗಳೇ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಅಶೋಕ್ ಕುಮಾರ್, ನಿಂಗರಾಜು, ವಿವೇಕ್, ಸಿದ್ದರಾಜುಗೌಡ, ನಿತ್ಯಾನಂದ, ಶಿವಕುಮಾರ್ ಆರಾಧ್ಯ, ಸಚಿನ್, ಪ್ರಮೋದ್ ಆರಾಧ್ಯ, ಆನಂದ್, ಮಧು ಇತರರಿದ್ದರು.