ರೈತ ಉತ್ಪಾದಕ ಕಂಪನಿಗೆ ನೀಡಬೇಕಾದ 2 ಕೋಟಿ ರೂ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ: ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಅಸಮಾಧಾನ

BJP Raitha Morcha criticizes Congress government Mandya
Published on

ಮಂಡ್ಯ: ಜಿಲ್ಲೆಯ 35 ರೈತ ಉತ್ಪಾದಕ ಕಂಪನಿಗಳಿಗೆ ನೀಡಬೇಕಿರುವ ಅಂದಾಜು 2 ಕೋಟಿ ರೂ ಬಾಕಿಯನ್ನು ರಾಜ್ಯಸರ್ಕಾರ ಉಳಿಸಿಕೊಂಡಿದೆ. ಕೂಡಲೇ ಹಣವನ್ನು ಬಿಡುಗಡೆ ಮಾಡಬೇಕೆಂದು ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ ಒತ್ತಾಯಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಕಂಪನಿಯಲ್ಲಿ ಸಾವಿರದಿಂದ ಐದು ಸಾವಿರಕ್ಕೂ ಹೆಚ್ಚು ಷೇರುದಾರರಿದ್ದಾರೆ. ರೈತರು ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಳೆ ಪಡೆದುಕೊಳ್ಳುವ ಉದ್ದೇಶದಿಂದ ಈ ಕಂಪನಿ ಕೆಲಸ ಮಾಡುತ್ತಿದೆ. ಇದಕ್ಕೆಂದು ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕೇಂದ್ರ ಸರ್ಕಾರದಿಂದ ನೀಡಲಾಗುವ ಅನುದಾನವನ್ನು ಕಡಿತಗೊಳಿಸುತ್ತಿದೆ. ಈ ನಿಟ್ಟಿನಲ್ಲಿ ಬಾಕಿ ಹಣವನ್ನು ಕೊಡುವಂತೆ ಡಿಸಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯ ಲಕ್ಷಾಂತರ ರೈತರ ಜೀವನಾಡಿಯಾಗಿರುವ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ವೀಕ್ಷಣೆ ಮಾಡಿದಾಗ ಆಘಾತವಾಯಿತು. ಇನ್ನೂ ಶೇ.1ರಷ್ಟು ಕೆಲಸವಾಗಿಲ್ಲ. ಆದರೆ 10 ದಿನದೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುತ್ತಾರೆ. ಈಗಾಗಲೇ ಆಗಿರುವ ಕಾಮಗಾರಿಯೂ ಗುಣಮಟ್ಟದಲ್ಲಿಲ್ಲ. ಇನ್ನು 20 ದಿನದೊಳಗೆ ಕೆಲಸ ಮುಗಿಸದಿದ್ದರೆ ನಾಲೆಯೊಳಗೆ ಇಳಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಹಾಗೆಂದ ಮಾತ್ರಕ್ಕೆ ಇಷ್ಟಬಂದಂತೆ ಕಳಪೆ ಗುಣಮಟ್ಟದ ಕೆಲಸ ಮಾಡುವಂತಿಲ್ಲ. ಈಗಾಗಲೇ ಕಳಪೆ ಕೆಲಸ ಮಾಡಿರುವುದನ್ನು ಪಟ್ಟಿ ಮಾಡಿಟ್ಟುಕೊಳ್ಳಲಾಗಿದೆ. ಅದನ್ನು ಸರಿಪಡಿಸಬೇಕು ಎಂದು ಹೇಳಿದರು.

ರಾಜ್ಯದಲ್ಲಿರುವ ಗುತ್ತಿಗೆದಾರರಿಗೆ ಒಂದು ಕಾನೂನಾದರೆ, ವಿಶ್ವೇಶ್ವರಯ್ಯ ನಾಲೆ ಕಾಮಗಾರಿ ಗುತ್ತಿಗೆ ಪಡೆದಿರುವ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಒಂದು ಕಾನೂನನ್ನು ರಾಜ್ಯಸರ್ಕಾರ ಮಾಡಿದೆ. ಶೇ.40ರಷ್ಟು ಕೆಲಸವಾಗದಿದ್ದರೂ, ಶೇ.40ರಷ್ಟು ಬಿಲ್ ಅನ್ನು ಅದಾಗಲೇ ಬಿಡುಗಡೆ ಮಾಡಿದೆ. ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಚುನಾವಣೆಗೆ ಸ್ಪರ್ಧೆ ಮಾಡಿಸುವುದನ್ನು ಬಿಟ್ಟು ನಾಲೆ ಕೆಲಸವನ್ನು ಪೂರ್ಣಗೊಳಿಸಬೇಕಿತ್ತು. ಆದರೆ ಈಗ ಮಾಡುತ್ತಿರುವ ಕೆಲಸ ನೋಡಿದರೆ ಮತ್ತೊಮ್ಮೆ ಕೃತಕ ಬರಗಾಲ ಸೃಷ್ಟಿಸುತ್ತಾರೆನ್ನುವ ಆತಂಕವಿದೆ ಎಂದು ವಾಗ್ದಾಳಿ ನಡೆಸಿದರು.

ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್‌ಕುಮಾರ್, ಅಶೋಕ್, ಜೋಗಿಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net