ರಾಜ್ಯಸರ್ಕಾರ ರೈತರ ನೆರವಿಗೆ ಬರಲಿ: ಬಿಜೆಪಿ ರೈತ ಮೋರ್ಚಾದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

1 (1)
Published on

ಮಂಡ್ಯ: ಬರಗಾಲದ ಪರಿಸ್ಥಿತಿ ಎದುರಾಗಿರುವ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ತಾಲೂಕು ಕಚೇರಿಗೆ ತೆರಳಿದ ಕಾರ್ಯಕರ್ತರು, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಅವರಿಗೆ ಮನವಿ ಸಲ್ಲಿಸಿ, ರಾಜ್ಯದಲ್ಲಿ ಮಳೆಯ ಅಭಾವದಿಂದ ಬರಗಾಲದ ಸಮಸ್ಯೆ ಉಂಟಾಗಿದೆ. ಜಲಾಶಯಗಳಲ್ಲಿ ಪ್ರತಿ ವರ್ಷ ಸಂಗ್ರಹವಾಗಬೇಕಿದ್ದ ನೀರಿನ ಪ್ರಮಾಣವು ಕುಸಿತ ಕಂಡಿದೆ. ಇದರಿಂದಾಗಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಪೂರೈಕೆಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವ ಆತಂಕ ಎದುರಾಗಿದೆ. ವಿದ್ಯುತ್ ಅಭಾವದಿಂದ ಇತ್ತೀಚಿಗೆ ಅನಿಯಮಿತ ಲೋಡ್ ಶೆಡ್ಡಿಂಗ್ ಪರಿಣಾಮ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ. ಈಗಾಗಲೇ ಶೇ.80ರಷ್ಟು ರೈತರು ಬಿತ್ತನೆ ಮಾಡಿದ್ದು, ಬೆಳೆಗಳನ್ನು ರಕ್ಷಿಸಿಕೊಳ್ಳಲು ವಿದ್ಯುತ್ ಸಮಸ್ಯೆ ಎದುರಾಗಿ ರೈತ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ರೈತರಿಗಾಗಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್ ನಿಧಿ , ರೈತ ವಿದ್ಯಾನಿಧಿ, ಭೂಸಿರಿ, ಶ್ರಮಶಕ್ತಿ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಗೋಶಾಲೆ, ಕ್ಷೀರ ಸಮೃದ್ಧಿ, ಸಹಕಾರ ಬ್ಯಾಂಕ್ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿೃಸಿದೆ. ಕಾಂಗ್ರೆಸ್ ಸರ್ಕಾರ ದುರಾಡಳಿತದಿಂದಾಗಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವುದ ಆತಂಕಕಾರಿ ಸಂಗತಿಯಾಗಿದೆ. ಆದ್ದರಿಂದ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಕಾರ್ಯೋನ್ಮುಖರಾಗಬೇಕು. ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಬೇಕು. ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಅನಿಯಮಿತ ಲೋಡ್ ಶೆಡ್ಡಿಂಗ್ ರದ್ದು ಪಡಿಸಿ ಏಳು ತಾಸು ವಿದ್ಯುತ್ ಪೂರೈಸಬೇಕು. ರೈತರ ಆತ್ಮಹತ್ಯೆ ತಡೆಯಲು ಧೈರ್ಯ ತುಂಬುವ ಮತ್ತು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಕಾರ್ಯಕ್ರಮ ಜಾರಿಗೊಳಿಸಬೇಕು. ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಮುಂದುವರಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರೈತ ಮೋರ್ಚಾ ಮುಖಂಡರಾದ ಸಿ.ಎ.ಜವರೇಗೌಡ, ಎಂ.ಸಿ.ಕಾಂತರಾಜು, ನಂಜುಂಡಸ್ವಾಮಿ ಆಲಕೆರೆ, ನಗರಸಭೆ ಮಾಜಿ ಸದಸ್ಯ ಚಂದ್ರು, ರಮೇಶ್, ಸಿದ್ದರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net