

ಮಂಡ್ಯ: ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅಶೋಕ್ ಜಯರಾಂ ಮಾತನಾಡಿ, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1 ರೂ.ನಿಂದ 2 ರೂ.ವರೆಗೆ ವಿವಿಧ ಒಕ್ಕೂಟಗಳಲ್ಲಿ ತಡೆಹಿಡಿಯಲಾಗಿದೆ. ಇದನ್ನು ಬಿಜೆಪಿ ರೈತ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ. ಹಾಲು ಉತ್ಪಾದಕರಿಗೆ 2 ರೂ ಪ್ರೋತ್ಸಾಹ ಧನವನ್ನು ನೀಡುತ್ತೇವೆಂದು ಕಳೆದ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಆ ಮಾತನ್ನು ಈಡೇರಿಸಿಲ್ಲ ಎಂದು ಟೀಕಿಸಿದರು.
2024ರ ಮೇ ತಿಂಗಳಿಂದ ರೈತರಿಗೆ ನೀಡಬೇಕಾಗಿರುವ 5 ರೂ. ಪ್ರೋತ್ಸಾಹ ಧನವನ್ನೂ ನೀಡಿಲ್ಲ. ಹಾಲಿನ ಉತ್ಪಾದನಾ ವೆಚ್ಚ ದುಪ್ಪಟ್ಟಾಗಿದೆ. ಒಕ್ಕೂಟಗಳು ಪಶು ಆಹಾರದ ಬೆಲೆಯನ್ನೂ ಹೆಚ್ಚಳಮಾಡಿವೆ. ಉತ್ಪಾದಕರು ಮತ್ತು ಜಾನುವಾರುಗಳ ಅಸ್ತಿತ್ವವನ್ನು ನಿರ್ನಾಮ ಮಾಡಲು ರಾಜ್ಯ ಸರ್ಕಾರ ಹೊರಟಂತಿದೆ. ತಕ್ಷಣ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಹಾಲಿನ ಖರೀದಿ ದರವನ್ನು ಹೆಚ್ಚಳ ಮಾಡಬೇಕು. ಹಾಲು ಉತ್ಪಾದಕ ರೈತರನ್ನು ಆರ್ಥಿಕವಾಗಿ ಸ್ವಾವಲಂಭಿಯನ್ನಾಗಿ ಮಾಡಬೇಕು. ಸಂಗ್ರಹವಾಗುತ್ತಿರುವ ಹಾಲನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸಿ ವಿಲೇ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.