ಬಿಜೆಪಿ-ಪುತ್ತಿಲ ಮಧ್ಯೆ ಸಂಸದ ಸಂಧಾನ - ಬಣ ನಡುವಿನ ಬಿಕ್ಕಟ್ಟು ಶಮನ ಯತ್ನ - ಪುತ್ತೂರಿನಲ್ಲಿ ರಹಸ್ಯ ಸಭೆ

PTR_29 AUG_4
Published on


ಸ್ಥಾನಮಾನ ಹಂಚಿಕೆ ವಿಚಾರದಲ್ಲಿ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಮುಖಂಡರ ಮಧ್ಯೆ ವೈಮನಸ್ಸು ಮುಂದುವರಿದಿದ್ದು, ಸರಿಪಡಿಸುವ ನಿಟ್ಟಿನಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಗುರುವಾರ ಮಧ್ಯಾಹ್ನ ಪುತ್ತೂರು ಬಿಜೆಪಿ ಕಚೇರಿಗೆ ಆಗಮಿಸಿ ಗುಪ್ತಸಭೆ ನಡೆಸಿದರು.


ವಿಧಾನಸಭಾ ಚುನಾವಣೆ ಸಂದರ್ಭ ಪುತ್ತೂರಿನಲ್ಲಿ ಬಿಜೆಪಿ ಒಡೆದ ಮನೆಯಾಗಿ ಪುತ್ತಿಲ ಪರಿವಾರದ ಹುಟ್ಟಿಗೆ ಕಾರಣವಾಗಿತ್ತು. ಆ ಬಳಿಕ ಹೀನಾಯ ಸೋಲು ಕಂಡ ಬಿಜೆಪಿ ಲೋಕಸಭಾ ಚುನಾವಣೆ ಸಂದರ್ಭ ಒಡಕಿಗೆ ತೇಪೆ ಹಾಕಿ ಒಮ್ಮತದಿಂದ ಹೋಗುವ ನಿರ್ಧಾರ ಕೈಗೊಂಡಿತ್ತು.


ಆದರೆ ಆ ಬಳಿಕ ಪುತ್ತಿಲ ಪರಿವಾರ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರಿಗೆ ಸರಿಯಾದ ಸ್ಥಾನಮಾನ ನೀಡುವುದಕ್ಕೆ ಬಿಜೆಪಿ ಮುಂದಾಗಿರಲಿಲ್ಲ. ಪುತ್ತಿಲ ಬಿಜೆಪಿ ಕಚೇರಿಗೆ ಬರುವುದಕ್ಕೂ ಬಿಜೆಪಿ ಬಣ ವಿರೋಧ ವ್ಯಕ್ತಪಡಿಸಿತ್ತು. ಪರಿವಾರದಲ್ಲಿ ಗುರುತಿಸಿಕೊಂಡ ಪ್ರಮುಖರಿಗೆ ಮಂಡಲ ಹಾಗೂ ಜಿಲ್ಲಾಮಟ್ಟದ ಸ್ಥಾನಮಾನ ನೀಡಲಾಗಿತ್ತು. ಇದು ಬಿಜೆಪಿಯ ಒಂದು ಬಣವನ್ನು ಕೆರಳಿಸಿದ್ದು, ಇದಕ್ಕಾಗಿ ಕೆಲ ಒಳತಂತ್ರವನ್ನು ಹೆಣೆಯಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.


*ಪರಿವಾರ ಕಡೆಗಣನೆ?:
ನಗರ ಹಾಗೂ ಗ್ರಾಮಾಂತರ ಮಂಡಲ ಪದಾಽಕಾರಿಗಳ ಆಯ್ಕೆ ಸಂದರ್ಭ ಬಿಜೆಪಿ ತರಾತುರಿ ನಿರ್ಧಾರ ತೆಗೆದುಕೊಂಡು ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡವರನ್ನು ಸೇರಿಸಿಕೊಳ್ಳದೆ ಪಟ್ಟಿ ಬಿಡುಗಡೆ ಮಾಡಿತ್ತು. ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಒಂದು ಬಣ ಕಾರ್ಯಕ್ರಮಕ್ಕೆ ಗೈರಾಗಿತ್ತು. ಇದನ್ನು ಪ್ರಶ್ನಿಸಲು ಹೋದವರಿಗೆ ಕಿರಿಕ್ ಮಾಡಲಾಗಿತ್ತು ಎಂಬ ಮಾಹಿತಿ ಕೆಲವು ಮೂಲಗಳಿಂದ ಬಹಿರಂಗವಾಗಿತ್ತು.
ಬಳಿಕ ಬಿಜೆಪಿ ಮತ್ತು ಪುತ್ತಿಲ ಪರಿವಾರ ಮಧ್ಯೆ ಮತ್ತೆ ಬಿರುಕು ಕಾಣಿಸಿಕೊಂಡಿದ್ದು, ಸರಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿತ್ತು. ಇದರ ಭಾಗವಾಗಿ ಸುಳ್ಯಕ್ಕೆ ಹೋಗುವ ಸಂದರ್ಭ ಸಂಸದ ಬ್ರಿಜೇಶ್ ಚೌಟ ಪುತ್ತೂರು ಬಿಜೆಪಿ ಕಚೇರಿಗೆ ಆಗಮಿಸಿ ಪರಿವಾರ ಹಾಗೂ ಬಿಜೆಪಿಯ ಪ್ರಮುಖರ ನಡುವೆ ಸಂಧಾನ ಮಾತುಕತೆ ನಡೆಸಿದ್ದಾರೆ. ಮುಂದಿನ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಸಮಸ್ಯೆ ಸರಿಪಡಿಸಲು ಒಮ್ಮತ ಮೂಡಿದೆ ಎನ್ನಲಾಗಿದೆ.


ಮಾಧ್ಯಮಕ್ಕೆ ಹೊರಹೋಗಲು ಸೂಚನೆ
ಸಂಸದ ಕ್ಯಾ.ಬ್ರಿಜೇಶ್ ಚೌಟ ಬಿಜೆಪಿ ಕಚೇರಿಗೆ ಬರುವ ವಿಚಾರವನ್ನು ಬಿಜೆಪಿ ಮಾಧ್ಯಮ ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಽಗಳು ಹೋಗಿದ್ದು, ಚೌಟ ಮಾತು ಆರಂಭಿಸುವ ಮುನ್ನ ಮಾಧ್ಯಮದವರನ್ನು ಗಮನಿಸಿ ಹೊರಹೋಗಲು ಸೂಚಿಸಿದ್ದಾರೆ. ಬಳಿಕ ಆಗಿರುವ ಪ್ರಮಾದಕ್ಕೆ ಮಾಧ್ಯಮ ಗ್ರೂಪ್‌ನಲ್ಲಿ ಕ್ಷಮೆ ಕೇಳಲಾಯಿತು.


ಆಡಿಯೋ ವೈರಲ್ ಬಗ್ಗೆ ಸ್ಪಷ್ಟನೆ
ಚುನಾವಣಾ ಸಂದರ್ಭ ೩.೫ ಕೋಟಿ ರೂ. ವ್ಯವಹಾರದ ಆಪಾದನೆ ಮತ್ತು ಸಾರ್ವಜನಿಕ ಸಭೆಯಲ್ಲಿ ಹೇಳಿದ ವಿಚಾರಕ್ಕೆ ಬದ್ಧನಾಗಿದ್ದೇನೆ. ಸುಳ್ಳು ಆರೋಪ ಮಾಡುವುದು ಸರಿಯಲ್ಲ. ರಾಜಕೀಯ ಷಡ್ಯಂತ್ರ ವಿಚಾರದಲ್ಲಿ ಹಿರಿಯರ ಹಾಗೂ ಅಽಕಾರಿಗಳ ಸೂಚನೆಯಂತೆ ಕಾನೂನು ಚೌಕಟ್ಟಿನಲ್ಲಿ ಮುಂದುವರಿಯುವುದಾಗಿ ಆಡಿಯೋ ವೈರಲ್ ವಿಚಾರ ಬಗ್ಗೆ ಪುತ್ತಿಲ ಪರಿವಾರದ ಲೆಟರ್‌ಹೆಡ್‌ನಲ್ಲಿ ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ ನೀಡಿದ್ದರು. ಬಿಜೆಪಿ ಸೇರಿದ ಬಳಿಕ ಪುತ್ತಿಲ ಪರಿವಾರದ ಲೆಟರ್‌ಹೆಡ್ ಬಳಕೆ ಮಾಡಿರುವ ಕುರಿತೂ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net