ನಗರದಲ್ಲಿ ಬಿಜೆಪಿಯಿಂದ ಜನಜಾಗೃತಿ: ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಮಾಹಿತಿ

BJP Public Awareness Mandya
Published on

ಮಂಡ್ಯ: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಲ್ಲಿ ಅರಿವು ಮೂಡಿಸಲು ಬಿಜೆಪಿ ವತಿಯಿಂದ ಬುಧವಾರ ಮನೆ ಮನೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದಲ್ಲಿಯೇ ಬಹುದೊಡ್ಡ ಹಗರಣವೆಂದು ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬಿಜೆಪಿ ಕೈಗೊಂಡಿದೆ. ಅದರಂತೆ ಬೆಂಗಳೂರಿನ ವಸಂತನಗರ ಶಾಖೆಯ ಯೂನಿಯನ್ ಬ್ಯಾಂಕ್‌ನಲ್ಲಿ ಖಾತೆ ಇದ್ದರೂ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಎಂ.ಜಿ ರಸ್ತೆಯ ಬ್ಯಾಂಕ್ ಶಾಖೆಯಲ್ಲಿ ಖಾತೆ ತೆರೆಯುವ ಅವಶ್ಯಕತೆಯಾದರೂ ಏನಿತ್ತು, ಹಗರಣಕ್ಕೆ ಯಾರು ಹೊಣೆ, ಸರ್ಕಾರದ ಹಸ್ತಕ್ಷೇಪವಿಲ್ಲದೆ ಇಷ್ಟೊಂದು ದೊಡ್ಡ ಆರ್ಥಿಕ ವ್ಯವಹಾರ ನಡೆಸಲು ಸಾಧ್ಯವೇ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್‌ನಲ್ಲಿ ಮಾ. 21 ಮತ್ತು 27ರಂದು ನಿಗಮದ ಪ್ರಮುಖ ಖಾತೆಯಿಂದ 87 ಕೋಟಿ ರೂ ಹಣ ವರ್ಗಾವಣೆ, ಖಾತೆ ತೆರೆದು ಒಂದು ವಾರದಲ್ಲಿ ಆ ಖಾತೆಗೆ ಇಷ್ಟೊಂದು ಹಣ ವರ್ಗಾವಣೆ ಮಾಡುವುದಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲೇ ಮುಖ್ಯ ಕಚೇರಿ ಇದ್ದರೂ, ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ ಸಹಕಾರಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದಾರೂ ಏಕೆ?. ವರ್ಗಾವಣೆಯಾದ ಹಣವನ್ನು ಹಿಂದಕ್ಕೆ ಪಡೆಯಲು ಕಸರತ್ತು ನಡೆಸುತ್ತಿರುವ ಸರ್ಕಾರದ ನಡೆಯಿಂದ ಇಷ್ಟೊಂದು ಅಕ್ರಮ ವರ್ಗಾವಣೆ ಎಂಬುದಕ್ಕೆ ಸರ್ಕಾರವೇ ಪುಷ್ಟಿ ನೀಡಿದಂತಾಗುವುದಿಲ್ಲವೇ?. ಇಷ್ಟೊಂದು ದೊಡ್ಡ ಮೊತ್ತದ ಹಣದ ಅವ್ಯವಹಾರದ ದಂದೆಯ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂಬ ವರದಿಗೆ ಕಾಂಗ್ರೆಸ್ ಚಕಾರವೆತ್ತುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಬೇಕಾದರೆ ಇಬ್ಬರು ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಸಹಿ ಮಾಡಬೇಕೆಂಬ ನಿಯಮವಿದ್ದರೂ, ಸಂಬಂಧಿತ ಇಲಾಖೆಯ ಹೊಣೆ ಹೊತ್ತ ಸಚಿವರು ಮೌಖಿಕ ಆದೇಶ ನೀಡಿದ್ದಾರೆಂಬ ಕಾರಣಕ್ಕೆ ಕಚೇರಿ ಅಧೀಕ್ಷಕ ಚಂದ್ರಶೇಖರ್ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಡೀ ಪ್ರಕರಣ ಹೊರಬಂದಿದೆ. ಇದರಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡ ಇದೆ ಎಂದು ದೂರಿದರು.

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ನಿಗಮದ ಖಾತೆಯಿಂದ ಹೈದರಾಬಾದ್‌ನ ರತ್ನಾಕರ ಬ್ಯಾಂಕ್‌ನಲ್ಲಿನ ಕೆಲ ವ್ಯಕ್ತಿಗಳ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತದೆ. ಈ ಬ್ಯಾಂಕ್ ಖಾತೆಗಳಿಗೆ ವ್ಯಕ್ತಿಗಳು ಇಷ್ಟೊಂದು ದೊಡ್ಡ ಮೊತ್ತದ ಹಣದ ವ್ಯವಹಾರವನ್ನು ನಡೆಸಲು ಪರೋಕ್ಷವಾಗಿ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಮನೆ ಮನೆಗೆ ಕರಪತ್ರಗಳನ್ನು ಬಿಜೆಪಿ ಕಾರ್ಯಕರ್ತರು ವಿತರಿಸಿ ಜಾಗೃತಿ ಮೂಡಿಸಿದರು.

ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್, ಎಸ್ಸಿ ಮತ್ತು ಎಸ್ಟಿ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ನಿತ್ಯಾನಂದ, ಮುಖಂಡರಾದ ಮಹಂತಪ್ಪ, ಯೋಗೇಶ, ನಂದೀಶ, ವೈರಮುಡಿ, ರಂಗಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net