ಗೊಂದಲ ಸೃಷ್ಟಿಸಲು ಬಿಜೆಪಿ ಪ್ರತಿಭಟನೆ

kukkudige Ravindra
Published on

ಕೊಪ್ಪ: ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಗೊಂದಲ ಸೃಷ್ಟಿ ಮಾಡಲು ಲ್ಯಾಂಡ್‌ಜಿಹಾದ್ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದೆ. ಇದು ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ನೋಟಿಸ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರಿಗೆ ಯಾವುದೇ ತೊಂದರೆ ನೀಡದಂತೆ ಸೂಚಿಸಿದ್ದಾರೆ. ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದರೂ ಅದನ್ನು ರದ್ದುಮಾಡಿ ಎಂದು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.

ಶೃಂಗೇರಿ ಕ್ಷೇತ್ರ ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ ಮಾತನಾಡಿ, ಬಿಜೆಪಿಗೆ ವಕ್ಫ್ ಕುರಿತು ಇತಿಹಾಸ ಗೊತ್ತಿಲ್ಲ, ಚುನಾವಣೆ ಸಂದರ್ಭ ಗೊಂದಲ ಮೂಡಿಸುವುದೇ ಅವರ ಕೆಲಸ. 2014ರಲ್ಲಿ ಮೋದಿ ಅವರ ಪ್ರಣಾಳಿಕೆಯಲ್ಲಿ ಧಾರ್ಮಿಕ ಮಂಡಳಿ ಸಮ್ಮುಖದಲ್ಲಿ ಚರ್ಚಿಸಿ ವಕ್ಫ್ ಆಸ್ತಿಗಳ ಅತಿಕ್ರಮಣ ಮತ್ತು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿತ್ತು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕುಮಾರಸ್ವಾಮಿ, ಸದಾನಂದಗೌಡ ಅವರು ಮುಖ್ಯಮಂತ್ರಿಯಾದಗಲೂ ವಕ್ಫ್ ಬೋರ್ಡನಿಂದ ನೋಟಿಸ್ ನೀಡಿತ್ತು. ಆಗ ಪ್ರತಿಭಟನೆ ಮಾಡದ ಬಿಜೆಪಿ, ಈಗ ಗೊಂದಲ ಸೃಷ್ಟಿಸಲು ಪ್ರತಿಭಟಿಸುತ್ತಿದೆ ಎಂದು ದೂರಿದರು.

ಕ್ಷೇತ್ರದ ಮಾಜಿ ಶಾಸಕ ಜೀವರಾಜ್ಗೆ ನೈತಿಕತೆ ಇದ್ದರೆ ಬೊಮ್ಮಾಯಿ ವಿರುದ್ಧ ಪ್ರತಿಭಟನೆ ಮಾಡಬೇಕಿತ್ತು. ಸಮಾಜದಲ್ಲಿ ಗೊಂದಲ ಸೃಷ್ಟಿಸುವುದೇ ಬಿಜೆಪಿ ಕೆಲಸ. ದಾನ ಕೊಟ್ಟಿರುವ ಜಾಗಕ್ಕೆ ಸಂಬಂಧಿಸಿದಂತೆ ಆಗಿರುವ ತಪ್ಪನ್ನು ತಿದ್ದುವ ಕೆಲಸವನ್ನು ಕೆಲವೇ ದಿನಗಳಲ್ಲಿ ಸರ್ಕಾರ ಮಾಡಲಿದೆ ಎಂದರು.

ಮುಖಂಡರಾದ ಜೇಸುದಾಸ್, ಸಂತೋಷ್ ಕುಲಾಸೋ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಸಂದೇಶ್, ಕಸಬಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪೂಜಾರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net