

ಸಕಲೇಶಪುರ: ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಕಪ್ಪುಮಸಿ ಬಳಿಯಲು ಷಡ್ಯಂತ್ರ ಹೆಣೆದಿರುವ ಸೂತ್ರಧಾರಿಗಳನ್ನು ಪತ್ತೆ ಹಚ್ಚಲು ಸರ್ಕಾರ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ಬಿಜೆಪಿಯಿಂದ ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಘೋಷಣೆಯಡಿ ಪ್ರತಿಭಟನೆ ನಡೆಯಿತು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಶಿಕ್ಷಣ, ಧಾರ್ಮಿಕ ಕ್ಷೇತ್ರ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರ ನಡೆಸಲು ಅಸಾಧ್ಯವಾದ ಕೆಲಸವನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾಡುತ್ತಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ ಇವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಅವರ ಅನುಭವವನ್ನು ದೇಶ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಇಂತಹ ಧರ್ಮಾಧಿಕಾರಿ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಹೆಣೆಯಲಾಗಿದೆ. ಈಗಾಗಲೇ ಪ್ರಕರಣದ ಪ್ರಮುಖ ಪಾತ್ರಧಾರಿಗಳು ತಪ್ಪೊಪ್ಪಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರಕರಣ ಸಮಗ್ರ ತನಿಖೆ ನಡೆಸಲು ಸಿಬಿಐ ತನಿಖಾ ಸಂಸ್ಥೆಗೆ ವಹಿಸಬೇಕು. ಆ ಮೂಲಕ ಎಷ್ಟೆ ಪ್ರಭಾವಸಾಲಿಗಳಾದರೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಇಂದು ಹಿಂದುಗಳು ಎಚ್ಚೆತ್ತಿದ್ದಾರೆ. ಧರ್ಮ ಹಾಗೂ ದೇಶಕ್ಕೆ ಕುಂದುಂಟಾಗುವಂತಹ ಘಟನೆಗಳು ನಡೆದರೆ ಬಿಜೆಪಿ ಪ್ರಬಲವಾಗಿ ಖಂಡಿಸಲಿದೆ. ಸದ್ಯ ಧರ್ಮಸ್ಥಳಕ್ಕೆ ಕಪ್ಪುಮಸಿ ಬಳಿಯುವ ದೇಶದ್ರೋಹಿಗಳ ಷಡ್ಯಂತ್ರ ಬಯಲಾಗಿದೆ. ತನಿಖೆಗಾಗಿ ಮಾಡಲಾಗಿರುವ ಇಷ್ಟು ವೆಚ್ಚವನ್ನು ಇವರಿಂದಲೇ ಭರಿಸಬೇಕು. ಬಳ್ಳಾರಿ ಮೂಲದ ಸಮೀರ್ ಬೆಂಗಳೂರಿನಲ್ಲಿ ನೆಲೆಸಿ ಧರ್ಮಸ್ಥಳದ ಬಗ್ಗೆ ವಿಡಿಯೋ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಇತನ ವಿರುದ್ಧ ಜಾಮೀನುರಹಿತ ಬಂಧನದ ವಾರಂಟ್ ಹೊರಡಿಸಿ ಬಂಧಿಸಿ ತನಿಖೆ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಹಳೇಬಸ್ ನಿಲ್ದಾಣದಿಂದ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ರಾಜೇಶ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು ತಾಲೂಕು ಬಿಜೆಪಿ ಅಧ್ಯಕ್ಷ ವಳಲಹಳ್ಳಿ ಅಶ್ವಥ್, ನಾರಯಣ ಆಳ್ವ, ಮಧುಬೊಮ್ಮನಕೆರೆ, ಸೋಮಶೇಖರ್, ರಾಮಚಂದ್ರೆಗೌಡ, ಕ್ಯಾಮನಹಳ್ಳಿ ರಾಜ್‌ಕುಮಾರ್ ಸೇರಿದಂತೆ ಹಲವರು ವಹಿಸಿದ್ದರು.
===========
23 ಎಸ್‌ಕೆಪಿಪಿ 1 ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಹೆಣೆಯುತ್ತಿರುವವರ ವಿರುದ್ದ ಶಿಕ್ಷೆ ವಿಧಿಸಬೇಕು ಎಂದು ಪಟ್ಟಣದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು. ಶಾಸಕ ಸೀಮೆಂಟ್ ಮಂಜು, ರಾಜೇಶ್, ವಳಲಹಳ್ಳಿ ಅಶ್ವಥ್, ನಾರಯಣ ಆಳ್ವ, ಮಧುಬೊಮ್ಮನಕೆರೆ, ಸೋಮಶೇಖರ್, ರಾಮಚಂದ್ರೆಗೌಡ ಇದ್ದರು.