

ಮಡಿಕೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಸೂಕ್ತ ಅನುದಾನ ಬಿಡುಗಡೆಯಾಗುತ್ತಿಲ್ಲವೆಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಮುಖರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದ ಪ್ರತಿಭನಾಕಾರರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಹಿಂದುಳಿದ ಸಮೂಹಗಳ ನೆರವಿನಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಅವರನ್ನೆ ಕಡೆಗಣಿಸುತ್ತಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಘೋಷಿಸಿರುವ ಭಾಗ್ಯಗಳನ್ನು ಪೂರೈಸುವ ಏಕಮಾತ್ರ ಉದ್ದೇಶದಿಂದ ವಿವಿಧ ನಿಗಮಗಳ ಹಣವನ್ನು ಭಾಗ್ಯಗಳಿಗೆ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ತಾವೇ ಘೋಷಿಸಿದ ಭಾಗ್ಯಗಳಿಗೆ ಅಗತ್ಯ ಹಣವನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ವ್ಯಂಗ್ಯವಾಡಿದ ಅವರು, ವಾಲ್ಮೀಕಿ ನಿಗಮದ ಭ್ರಷ್ಟಾಚಾರದಿಂದ ಸಚಿವರೊಬ್ಬರು ಜೈಲಿಗೆ ಹೋಗಿ ಬರುವಂತಾಗಿದೆ. ಮುಡಾ ಹಗರಣದ ಆರೋಪಗಳು ತಮ್ಮ ವಿರುದ್ಧ ತಿರುಗುತ್ತಿರುವಂತೆಯೇ ೧೪ ನಿವೇಶನಗಳನ್ನು ಏಕಾಏಕಿ ಹಿಂದಕ್ಕೆ ನೀಡಿದ ಬೆಳವಣಿಗೆಯೂ ನಡೆದಿದೆ ಎಂದು ಟೀಕಿಸಿದರು.
ವಕ್ಫ್‌ಗೆ ಸೇರಿರುವ ಹಾಗೂ ಅದನ್ನು ಕಬಳಿಸಿರುವವರ ಆಸ್ತಿಯನ್ನು ಪತ್ತೆ ಮಾಡಿ ತೆರವುಗೊಳಿಸಲಿ. ಅನಗತ್ಯವಾಗಿ ಎಷ್ಟೋ ವರ್ಷಗಳಿಂದ ಕೃಷಿಮಾಡಿಕೊಂಡು ಬಂದ ಭೂಮಿಯನ್ನು, ಮಠ ಮಾನ್ಯಗಳ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಪಡೆಯಲು ಮುಂದಾದಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಸೇರಿದ ವಾಲ್ಮೀಕಿ, ಕಾಡುಗೊಲ್ಲರು ಸೇರಿದಂತೆ ವಿವಿಧ ಸಮೂಹಗಳ ಅಭಿವೃದ್ಧಿಗೆ ಇರುವ ನಿಗಮ ಮಂಡಳಿಗಳಿಗೆ ಕಾಂಗ್ರೆಸ್ ಸರ್ಕಾರ ಅನುದಾನ ಒದಗಿಸುವಲ್ಲಿ ತಾರತಮ್ಯ ಧೋರಣೆಯನ್ನು ತಳೆದಿದೆ. ಹಿಂದೆ ನಿಗಮ ಮಂಡಳಿಗಳಿಗೆ ೫೭೬ ಕೋಟಿ ಅನುದಾನವನ್ನು ಒದಗಿಸಲಾಗಿತ್ತು. ಕಳೆದ ೨೦೨೩-೨೪ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ೩೪೦ ಕೊಟಿ ರೂ.ಗಳನ್ನಷ್ಟೆ ನೀಡಿದ್ದು, ಇದರಲ್ಲಿ ಕೆೇವಲ ೧೭೦ ಕೋಟಿಯಷ್ಟು ಬಳಕೆಯಾಗಿದೆಯೆಂದು ಆರೋಪಿಸಿದರು.
ಗಂಗಾಕಲ್ಯಾಣ ಯೋಜನೆಯಡಿ ೨ ಹೆಕ್ಟೇರ್ ಒಳಗಿನ ಬಡ ರೈತರಿಗೆ ಅಗತ್ಯ ನೆರವು ಒದಗಿಸಲು ಅರ್ಜಿಗಳನ್ನು ಸ್ವೀಕರಿಸಲಾಗಿದ್ದರು, ನೆರವನ್ನು ಬಿಡುಗಡೆ ಮಾಡಿಲ್ಲವೆಂದು ಟೀಕಿಸಿದರು.
ಮೋರ್ಚಾದ ಜಿಲ್ಲಾಧ್ಯಕ್ಷ ಅಪ್ರು ರವೀಂದ್ರ ಮಾತನಾಡಿ, ಬಜೆಟ್‌ನಲ್ಲಿ ಘೋಷಿಸುವ ಮೊತ್ತಕ್ಕೂ, ವಾಸ್ತವವಾಗಿ ಬಿಡುಗಡೆ ಮಾಡುವ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದರಿಂದ ಹಿಂದುಳಿದ, ಅತೀ ಹಿಂದುಳಿದ, ಅಲೆಮಾರಿ ಸಮುದಾಯಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಇತರ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ ಎಂದರು.
ಈ ಹಿಂದಿನ ಸರ್ಕಾರದಲ್ಲಿ ಸ್ವ-ಉದ್ಯೋಗ, ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಅರಿವು ಯೋಜನೆ ಹಾಗೂ ಸಣ್ಣ ಹಿಡುವಳಿದಾರ ರೈತರಿಗಾಗಿ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರು ಮಾಡಲಾಗುತ್ತಿದ್ದ ಉಚಿತ ಬೋರ್‌ವೆಲ್ ಸೌಲಭ್ಯ ಬಹುತೇಕ ಸ್ಥಗಿತಗೊಂಡಿದೆ. ಪಂಚಭಾಗ್ಯ ಯೋಜನೆಯ ಅನುಷ್ಠಾನಕ್ಕಾಗಿ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ಕೆ ವಿನಿಯೋಗವಾಗಬೇಕಿದ್ದ ಹಣವೆಲ್ಲವೂ ವರ್ಗಾವಣೆಯಾಗುತ್ತಿದೆ. ರಾಜಕೀಯ ಸ್ವಾರ್ಥಕ್ಕಾಗಿ ಅಹಿಂದ ಮಂತ್ರ ಪಠಿಸುವ ಹಾಗೂ ಹಿಂದುಳಿದ ಸಮುದಾಯಗಳನ್ನು ಬಳಸಿಕೊಳ್ಳುವ ಸಿಎಂ ಸಿದ್ಧರಾಮಯ್ಯನವರು ಹಿಂದುಳಿದ ಹಾಗೂ ಅತೀ ಹಿಂದುಳಿದ ಸಮುದಾಯಗಳ ಕಲ್ಯಾಣ ಕಾರ್ಯಕ್ಕೆ ಕಲ್ಲು ಹಾಕಿದ್ದಾರೆ ಎಂದು ಅಪ್ರು ರವೀಂದ್ರ ಆರೋಪಿಸಿದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ, ಬಿಜೆಪಿ ಮುಖಂಡ ಶಾಂತೆಯಂಡ ರವಿ ಕುಶಾಲಪ್ಪ, ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ಪ್ರದೀಪ್ ಪೂಜಾರಿ, ನಗರಾಧ್ಯಕ್ಷ ಗಜ ಭಗವತಿ, ಸುಂಟಿಕೊಪ್ಪ ಅಧ್ಯಕ್ಷ ಪಿ.ಆರ್.ಸುನಿಲ್, ವಿರಾಜಪೇಟೆ ಪೊಟ್ಟಂಡ ನವೀನ್ ಉತ್ತಪ್ಪ, ಉಪಾಧ್ಯಕ್ಷ ಗಿರೀಶ್, ಸೋಮವಾರಪೇಟೆ ಉಪಾಧ್ಯಕ್ಷ ಪಿ.ಎನ್.ಗಂಗಾಧರ ಮತ್ತಿತರರು ಪಾಲ್ಗೊಂಡಿದ್ದರು.