

ಮಡಿಕೇರಿ: ಕೊಡಗು ವಿಶ್ವ ವಿದ್ಯಾಲಯವನ್ನು ರದ್ದುಗೊಳಿಸಬಾರದು, ಸಿ ಮತ್ತು ಡಿ ಭೂಮಿಯ ಗೊಂದಲ ನಿವಾರಿಸಬೇಕು, ಪರಿಶಿಷ್ಟರ ಅನುದಾನವನ್ನು ಉಚಿತ ಭಾಗ್ಯಗಳಿಗೆ ಬಳಸಬಾರದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿತು.
ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಹಿನ್ನೆಲೆ ಅಧಿವೇಶನದಲ್ಲಿ ಜಿಲ್ಲೆಯ ಸಮಸ್ಯೆಗಳು ಪರಿಹಾರವಾಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಧರಣಿ ಸತ್ಯಾಗ್ರಹಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಬಂದ್‌ಗೆ ಕರೆ ಕೊಡುವುದು ಅನಿವಾರ್ಯವಾಗುತ್ತದೆ ಎಂದರು.
ಮಾಜಿ ಸಚಿವ ಮತ್ತು ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಕೂಲಿ ಕಾರ್ಮಿಕರು ಮತ್ತು ಬಡವರಿಗಾಗಿ ವಿಶ್ವವಿದ್ಯಾಲಯವನ್ನು ಆರಂಭಿಸಲಾಯಿತು. ಇಪ್ಪತ್ತು ವರ್ಷಗಳಿಂದ ಪ್ರಯತ್ನ ಮಾಡಿ ೨೦೧೦ರಲ್ಲಿ ಯಡಿಯೂರಪ್ಪ ಅವರು ೧೫ ಕೋಟಿ ನೀಡಿ ಕಟ್ಟಡದ ಸಂಕುಸ್ಥಾಪನೆ ನೆರವೇರಿಸಿದರು. ನಂತರ ೧೦೦ ಎಕರೆ ಜಾಗದ ವ್ಯವಸ್ಥೆ ಮಾಡಲಾಯಿತು. ಅಲ್ಲದೇ, ೪೦೦ ವಿದ್ಯಾರ್ಥಿಗಳು ಉಳಿಯುವ ವಸತಿನಿಲಯ ಕೂಡ ಮಾಡಲಾಗಿದೆ. ಶೇ.೮೦ ರಷ್ಟು ಬಡವರ ಮಕ್ಕಳು ಓದುತ್ತಿದ್ದಾರೆ. ಇದಕ್ಕಾಗಿ ವಿವಿ ಉಳಿಯಬೇಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಸುನೀಲ್ ಸುಬ್ರಮಣಿ, ಬಿಜೆಪಿ ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಸೇರಿದಂತೆ ವಿವಿಧ ಮೋರ್ಚಾಗಳ ಪ್ರಮುಖರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮಾ.೭ರ ಮಧ್ಯಾಹ್ನ ೨ ಗಂಟೆಯವರೆಗೆ ಅಹೋ ರಾತ್ರಿ ಧರಣಿ ಸತ್ಯಾಗ್ರಹ ನಡೆಯಲಿದೆ.