ಹೆಬ್ಬಾಳ್ಕರ್ ಬೆಂಬಲಿಗರ ವಿರುದ್ಧ ಕ್ರಮಕ್ಕೆ ಒತ್ತಾಯಸಿ ಬಿಜೆಪಿ ಪ್ರತಿಭಟನೆ

bjp protest
ಎಂಎಲ್‌ಸಿ ಸಿ.ಟಿ.ರವಿ ಅವರಿಗೆ ಕೊಲೆ ಬೆದರಿಕೆ ಹಾಕಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಸ್.ಎನ್.ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಟಿ.ಡಿ.ಮೇಘರಾಜ್, ಮೋಹನ್ ರೆಡ್ಡಿ, ಎಸ್.ದತ್ತಾತ್ರಿ, ಬಿ.ಕೆ.ಶಿವರಾಜ್, ಸುರೇಖಾ ಮುರುಳೀಧರ್, ಡಾ. ಶಾಂತಾ ಸುರೇಂದ್ರ ಇತರರಿದ್ದರು.
Published on

ಶಿವಮೊಗ್ಗ: ಮಾಜಿ ಸಚಿವ, ಎಂಎಲ್‌ಸಿ ಸಿ.ಟಿ.ರವಿ ಅವರನ್ನು ರಾಜ್ಯ ಸರ್ಕಾರ ಅಮಾನುಷವಾಗಿ ನಡೆಸಿಕೊಂಡಿದೆ. ಕೊಲೆ ಬೆದರಿಕೆ ಹಾಕಿದ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಸರ್ಕಾರ ಗೂಂಡಾ ಪ್ರವೃತ್ತಿ ತೋರುತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರು ಸುವರ್ಣ ಸೌಧಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ್ದಲ್ಲದೆ, ಜನಪ್ರತಿನಿಧಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇಂತಹ ವರ್ತನೆ ತೋರಿದವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಪ್ರತಿಪಕ್ಷಗಳ ಮೇಲೆ ದಬ್ಬಾಳಿಕೆಗೆ ಮುಂದಾಗಿದೆ. ಸಿ.ಟಿ.ರವಿ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ. ಇಂತಹ ಯಾವುದೇ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ. ಯಾವುದೇ ಪ್ರಕರಣ ಅಥವಾ ಎಫ್‌ಐಆರ್ ಹಾಕಿದರೂ ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರವಿ ಅವರನ್ನು ಬಂಧಿಸುವುದಾದರೆ, ಸಂಸತ್‌ನಲ್ಲಿ ದುರ್ವರ್ತನೆ ತೋರಿದ ಸಂಸದ ರಾಹುಲ್ ಗಾಂಧಿ ಅವರನ್ನು ಏನು ಮಾಡಬೇಕು? ಹಿರಿಯ ಸಂಸದರನ್ನು ಅವಮಾನಿಸಿದ, ಮಹಿಳಾ ಸಂಸದರೊಂದಿಗೆ ಅನುಚಿತವಾಗಿ ನಡೆದುಕೊಂಡ ರಾಹುಲ್ ಗಾಂಧಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಆಗ್ರಹಿಸಿದರು.

ಜನರ ಗಮನವನ್ನು ಮುಡಾ, ವಾಲ್ಮೀಕಿ, ಭೋವಿ ನಿಗಮದ ಹಗರಣಗಳಿಂದ ಬೇರೆಡೆ ಸೆಳೆಯಲು ಕಾಂಗ್ರೆಸ್ ಇಂತಹ ನಾಟಕ ಮಾಡುತ್ತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕರು ಸೇರಿ ಹಲವರು ಸಿ.ಟಿ.ರವಿ ಅವರ ಮೇಲೆ ದಾಳಿ ಮಾಡಲು ಯತ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಒಬ್ಬ ಆರೋಪಿ. ರಾಜ್ಯಪಾಲರು ಮಧ್ಯಪ್ರವೇಶಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ನಗರ ಘಟಕದ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಎಸ್.ದತ್ತಾತ್ರಿ, ಬಿ.ಕೆ.ಶಿವರಾಜ್, ಸುರೇಖಾ ಮುರುಳೀಧರ್, ಡಾ. ಶಾಂತಾ ಸುರೇಂದ್ರ, ಚಂದ್ರಶೇಖರ್, ಎನ್.ಕೆ.ಜಗದೀಶ್, ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net