

ಮಂಡ್ಯ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಖಂಡಿಸಿ ಹಾಗೂ ರಾಜ್ಯಸರ್ಕಾರದ ನಿರ್ಲಕ್ಷೃ ಧೋರಣೆ ಖಂಡಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕೆಚ್ಚಲು ಕೊಯ್ದ ಘಟನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸದೇ ರೈತ ಮತ್ತು ಗೋವು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ ಮುಖವಾಡಕ್ಕೆ ಸಗಣಿ ಬಳಿಯಲು ಮುಂದಾದರು. ಈ ವೇಳೆ ಪೋಲಿಸರು ತಡೆಯಲು ಯತ್ನಿಸಿದಾಗ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು
ಭಾರತೀಯ ಸಂಸ್ಕೃತಿಯಲ್ಲಿ ಗೋವು ಆಧಾರಿತ ಕೃಷಿ ಬಹು ಮುಖ್ಯವಾದ ವಿಚಾರವಾಗಿದೆ. ಗೋವು, ಮನುಷ್ಯ ಹಾಗೂ ಪ್ರಕೃತಿಗೆ ಅವಿನಾಭಾವ ಸಂಬಂಧ ಇದ್ದು, ಭಾರತೀಯ ಪರಂಪರೆಯಲ್ಲಿ ಗೋ ಮಾತೆಗೆ ತನ್ನದೆ ಆದ ವಿಶಿಷ್ಟೃ ಸ್ಥಾನವಿದೆ. ದೇಶದಲ್ಲಿ ಕೃಷಿ ಉಳಿದಿದ್ದರೆ ಅದು ಗೋ ಮಾತೆಯ ಕಾಣಿಕೆಯಾಗಿದೆ. ಹೀಗಿರುವಾಗ ಕೋಟ್ಯಂತರ ಜನರ ಭಾವನೆಗಳೊಂದಿಗೆ ಬೆರೆತಿರುವ ಗೋ ಮಾತೆಯನ್ನು ಸಂರಕ್ಷಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಸಡ್ಡೆ ತೋರ್ಪಡಿಸುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದ ಹಸುವಿನ ಕೆಚ್ಚಲು ಕತ್ತರಿಸಿರುವ ಪ್ರಕರಣದಲ್ಲಿ ದೊಡ್ಡ ಗ್ಯಾಂಗ್ ಕೈವಾಡವಿದೆ. ಆದಾಗ್ಯೂ ಪೊಲೀಸ್ ಇಲಾಖೆ ಒಬ್ಬ ವ್ಯಕ್ತಿಯನ್ನು ಬಂಧಿಸಿ ಕಸ್ಟಡಿಗೂ ಪಡೆಯದೆ ಏಕಾಏಕಿ ಜೈಲಿಗಟ್ಟಿರುವುದು ಹಲವು ಅನುಮಾನ ಮೂಡಿಸುತ್ತಿದೆ. ಆದ್ದರಿಂದ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ದುರುಳರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಡಳಿತದಲ್ಲಿದ್ದಾಗ 15 ಜಿಲ್ಲೆಗಳಲ್ಲಿ ಗೋ ಶಾಲೆ ಪ್ರಾರಂಭಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಹು ಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಗೋ ಶಾಲೆಗಳಿಗೆ ಅನುದಾನ ಕಡಿತಗೊಳಿಸಿ ಅದರ ಮೂಲ ಉದ್ದೇಶಗಳಿಗೆ ತೊಂದರೆ ಕೊಟ್ಟಿದೆ. ಮಾತ್ರವಲ್ಲದೆ ಗೋ ಶಾಲೆಗಳನ್ನು ಮುಚ್ಚಲು ಹೊರಟಿರುವುದು ರಾಜ್ಯದ ಮತದಾರರಿಗೆ ಮಾಡಿರುವ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅಂದಾಜು 1.19 ಕೋಟಿ ಜಾನುವಾರುಗಳಿವೆ. ಇವುಗಳ ಸಂರಕ್ಷಣೆ ಮಾಡಲು ಮತ್ತು ಹಾಲು ಉತ್ಪಾದಕರಿಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಸಾಕಷ್ಟು ಪುರಸ್ಕೃತ ಯೋಜನೆಗಳನ್ನು ರೂಪಿಸಿದೆ. ಇಂತಹ ಯೋಜನೆಗಳನ್ನು ಅನುಷ್ಠಾನ ಮಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಆದರೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದು ರಾಜ್ಯ ಸರ್ಕಾರದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ. ಗೋ ಶಾಲೆಗಳನ್ನು ಮುಚ್ಚುವ ಮೂಲಕ ಗೋ ಕಳ್ಳ ಸಾಗಣೆಯನ್ನು ಉತ್ತೇಜನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಗೋ ಶಾಲೆಗಳನ್ನು ಪುನರಾರಂಭಿಸಬೇಕು. ಗೋ ಶಾಲೆಗಳಿಗೆ ವಿಶೇಷ ಅನುದಾನವನ್ನು ನೀಡಬೇಕು. ಕೇಂದ್ರ ಪುರಸ್ಕೃತ ಗೋ ಆಧಾರಿತ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ಬಹು ಸಂಖ್ಯಾತರ ಭಾವನೆಗಳಿಗೆ ಧಕ್ಕೆಯಾಗದ ರೀತಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಮಳವಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಕಾರ್ಯದರ್ಶಿ ಆನಂದ್, ನಾಗಮಂಗಲ ನರಸಿಂಹಮೂರ್ತಿಗೌಡ, ರಮೇಶ್ ವಿಶ್ವಕರ್ಮ, ನಿಂಗರಾಜು, ಶಿವಕುಮಾರ್ ಆರಾಧ್ಯ, ಗ್ರಾಮಾಂತರ ಅಧ್ಯಕ್ಷ ಭೀಮೇಶ್, ಜವರೇಗೌಡ , ಮದ್ದೂರು ಸತೀಶ್, ಜೋಗಿಗೌಡ, ಪಿ.ಹಳ್ಳಿ ರಮೇಶ್ ಇತರರಿದ್ದರು.