

ಮಂಡ್ಯ: ರಾಮಮಂದಿರ ಕರಸೇವೆ ಹೋರಾಟದಲ್ಲಿ ಭಾಗಿಯಾಗಿದ್ದವರ ಬಂಧನ ಖಂಡಿಸಿ ನಗರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಬಿಜೆಪಿ ವಿಕಾಸ ಭವನದ ಬಳಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. 31 ವರ್ಷದ ಹಿಂದಿನ ಪ್ರಕರಣವನ್ನು ಮರು ಪ್ರಾರಂಭಿಸುವುದರ ಜತೆಗೆ ಹಿಂದು ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರಸೇವಕನನ್ನು ಬಂಧಿಸುವ ಮೂಲಕ ರಾಜ್ಯಸರ್ಕಾರ ಹಿಂದು ವಿರೋಧಿ ಎನ್ನುವುದನ್ನು ರಾಜ್ಯ ಮತ್ತು ದೇಶದ ಜನತೆಗೆ ಪದೇ ಪದೇ ನೆನಪು ಮಾಡುವ ಕೆಲಸ ಮಾಡುತ್ತಿದೆ. ಮಾತ್ರವಲ್ಲದೆ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರ ಸುಮಾರು 31 ವರ್ಷದ ಹಳೆಯ ಕೇಸುಗಳನ್ನು ಮರು ಪ್ರಾರಂಭಿಸಿ ಹಿಂದುಗಳನ್ನು ಬಂಧಿಸುತ್ತಿದೆ ಎಂದು ಟೀಕಿಸಿದರು.
ಜ.22ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಠಾಪನೆ ಆಗುವ ಶುಭ ಸಂದರ್ಭದಲ್ಲಿ ಇಡೀ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಕೋಟ್ಯಂತರ ಹಿಂದು ಕಾರ್ಯಕರ್ತರು ಸಂತಸದಲ್ಲಿದ್ದಾರೆ. ಇಂತಹ ಸಂದರ್ಭವನ್ನೇ ಆಯ್ಕೆ ಮಾಡಿಕೊಂಡು ಕಾನೂನು ಕ್ರಮದ ಹೆಸರಲ್ಲಿ ಕರಸೇವಕರ ಬಂಧನಕ್ಕೆ ಮುಂದಾಗಿದೆ. ಇದರೊಂದಿಗೆ ತಮ್ಮದು ಹಿಂದು ವಿರೋಧಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಪದೇ ಪದೇ ಅಲ್ಪಸಂಖ್ಯಾತರನ್ನು ಓಲೈಸುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಬರಗಾಲದ ಸಂದರ್ಭದಲ್ಲೂ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ಇಡೀ ದೇಶದಲ್ಲಿ ಸಂಭ್ರಮ ಇರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ಹಿಂದುಗಳ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು, ಅಯೋಧ್ಯೆಯ ಮಂತ್ರಾಕ್ಷತೆಯನ್ನು ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಪ್ರತಿ ಮನೆಗೂ ತಲುಪಿಸುತ್ತಿದ್ದಾರೆ. ಅಲ್ಲಿಯೂ ಕೂಡ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡುತ್ತಿದೆ. ಪುಡಾರಿತನ ಮಾಡುತ್ತಿದೆ. ದೇಶವೇ ಸಂಭ್ರಮದಲ್ಲಿ ಇರುವಾಗ ರಾಮಭಕ್ತನನ್ನು ಬಂಧಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ದುಸ್ಸಾಹಸಕ್ಕೆ ಮುಖ್ಯಮಂತ್ರಿ, ಗೃಹಸಚಿವರು ಕೈ ಹಾಕುತ್ತಿದ್ದಾರೆ. ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯ ದಿನ ಹತ್ತಿರ ಬರುತ್ತಿದೆ. ರಾಮಮಂದಿರದ ಮೂಲಕ ರಾಷ್ಟ್ರ ಮಂದಿರ ನಿರ್ಮಾಣಕ್ಕಾಗಿ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರಕ್ಕೆ ಆದ್ಯತೆ ಯಾವುದು?. 31 ವರ್ಷ ಹಳೆಯ ಕೇಸನ್ನು ಈಗಲೇ ರೀ ಓಪನ್ ಮಾಡಬೇಕಿತ್ತೇ?. ಮುಂದೆ ನಡೆಯುವ ಘಟನೆಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರೇ ಹೊಣೆಗಾರರಾಗುತ್ತಾರೆ. ರಾಷ್ಟ್ರಮಟ್ಟದ ಈ ಕಾರ್ಯಕ್ರಮಕ್ಕೆ ಯಾವ ಆಹ್ವಾನವೂ ಬೇಡ. ಸಿದ್ದರಾಮಯ್ಯ ಅವರಿಗೆ ಬದ್ಧತೆ, ಹಿಂದುತ್ವದ ಬಗ್ಗೆ ನೈಜ ಕಳಕಳಿ ಇದ್ದರೆ ಚುನಾವಣೆಯ ಹಿಂದು ಎನ್ನಿಸಿಕೊಳ್ಳದೇ, ನೈಜ ಹಿಂದು ಎಂದು ಪ್ರಕಟ ಮಾಡಬೇಕಿದ್ದರೆ ಜ.22ರಂದು ರಾಜ್ಯದ ಎಲ್ಲ ಮುಜರಾಯಿ ದೇವಾಲಯಗಳಲ್ಲಿ ವಿಶೇಷವಾದ ಪೂಜೆ ಮಾಡಿಸಲು ಸೂಚಿಸಬೇಕು. 100 ದೇವಾಲಯಕ್ಕೆ ತಲಾ 100 ಕೋಟಿ ರೂ ಅನುದಾನವನ್ನು ಮುಂದಿನ 3 ವರ್ಷಗಳಲ್ಲಿ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಡಾ.ಎನ್.ಎಸ್.ಇಂದ್ರೇಶ್, ಅಶೋಕ್ ಜಯರಾಂ, ಮುನಿರಾಜು, ಎಸ್.ಪಿ.ಸ್ವಾಮಿ, ಎಚ್.ಆರ್.ಅರವಿಂದ್, ಅಶೋಕ್, ವಿವೇಕ್, ಪ.ನಾ.ಸುರೇಶ್, ಹೆಬ್ಬಣಿ ಬಸವರಾಜು, ಹರ್ಷ, ಕಾಂತರಾಜು, ಸಿ.ಟಿ.ಮಂಜುನಾಥ್, ನವನೀತ್‌ಗೌಡ, ಹೊಸಹಳ್ಳಿ ಶಿವು, ಪ್ರಸನ್ನಕುಮಾರ್, ಶಿವಕುಮಾರ್, ಕೆಂಪಯ್ಯ, ಚಂದ್ರು, ಹೇಮಾವತಿ, ನಾಗರತ್ನ ಇತರರಿದ್ದರು.