ಅಮಾನುಷ ಕೃತ್ಯದ ಚರ್ಚೆಗೆ ಸಿಗದ ಅವಕಾಶ: ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ

BJP protests against the state government Mandya
Published on

ಮಂಡ್ಯ: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಅಮಾನುಷವಾಗಿ ಹಲ್ಲೆ ಮಾಡಿರುವ ಪ್ರಕರಣದ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ಚರ್ಚೆಗೆ ರಾಜ್ಯಸರ್ಕಾರ ಅವಕಾಶ ಮಾಡಿಕೊಡಲಿಲ್ಲವೆಂದು ಆರೋಪಿಸಿ ನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ವಿಪಕ್ಷ ನಾಯಕ ಆರ್.ಅಶೋಕ್, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು, ರಾಜ್ಯಸರ್ಕಾರ ಹಾಗೂ ಸಭಾಧ್ಯಕ್ಷರು ಮಲತಾಯಿ ಧೋರಣೆ ತೋರಿದರೆಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಆರ್.ಅಶೋಕ್, ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಪ್ರಕರಣ ಅಮಾನುಷ ಕೃತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಮಾಹಿತಿ ನೀಡಬೇಕಾಗಿತ್ತು. ಆದರೆ ವಿಷಯ ಪ್ರಸ್ತಾಪಿಸಿದರೆ ಎಲ್ಲಿ ಚರ್ಚೆಗೆ ಬರಲಿದೆ ಎಂಬ ಭಯದಿಂದ ಸುಮ್ಮನಾದರೆಂದು ಟೀಕಿಸಿದರು.

ಅಧಿವೇಶನ ನಡೆಯುವ ಜಿಲ್ಲೆಯಲ್ಲಿ ಪ್ರಕರಣ ನಡೆದಿದ್ದರೂ ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಪ್ರಕರಣದ ಪ್ರಾಥಮಿಕ ಮಾಹಿತಿ ವರದಿ ನೋಡಿದರೆ ಎಂತಹ ಅಮಾನುಷ ನಡೆದಿದೆ ಎಂಬುದು ತಿಳಿಯಲಿದೆ. ಆದರೂ ಸಹ ಕಾಂಗ್ರೆಸ್ ಏನು ನಡೆದಿಲ್ಲ ಎಂದು ಬೊಬ್ಬೆ ಹಾಕಿತು. ಈ ಮೂಲಕ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿತು. ಸಂತ್ರಸ್ತ ಮಹಿಳೆಗೆ ಘಟನೆ ನಡೆದು ಹಲವು ದಿನಗಳು ಕಳೆದರೂ ಪರಿಹಾರ ನೀಡದೆ ನಿರ್ಲಕ್ಷೃ ವಹಿಸಿತ್ತು. ಬಿಜೆಪಿ ಪಕ್ಷದ ಸತ್ಯಶೋಧನ ಸಮಿತಿ ತಂಡ ಭೇಟಿ ನೀಡುವ ವಿಚಾರ ತಿಳಿದು ಸಂತ್ರಸ್ತ ಮಹಿಳೆಗೆ ಪರಿಹಾರ ನೀಡಿದೆ. ಹಾಗಿದ್ದರೆ ಇಷ್ಟು ದಿನ ಏಕೆ ನೀಡಿರಲಿಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ನಂಜುಂಡೇಗೌಡ, ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ, ಎಸ್.ಪಿ.ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net