

ಮಂಡ್ಯ: ಹಿಂದುಳಿದ ವರ್ಗದ ಮೀಸಲಾತಿಯನ್ನು ಕಸಿದು ಮುಸ್ಲಿಂ ಸಮುದಾಯಕ್ಕೆ ನೀಡಲು ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಒಕ್ಕೂಟ ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬಳಿಕ ಮೆರವಣಿಗೆ ಹೊರಟು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಐಎನ್‌ಡಿಐಎ ಒಕ್ಕೂಟದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಂತೆಯೇ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮನವಿ ಸ್ವೀಕರಿಸಿದರು.
ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ವರ್ಗದ ಮೀಸಲಾತಿಯನ್ನು ಧರ್ಮದ ಹೆಸರಿನಲ್ಲಿ ಮುಸ್ಲಿಂರಿಗೆ ನೀಡಲು ಮುಂದಾಗಿರುವುದು ಖಂಡನೀಯ. ಅಲ್ಲಿನ ಸರ್ಕಾರದ ಸಂವಿಧಾನ ವಿರೋಧಿ ದೋಷ ಪೂರಿತ ಮೀಸಲಾತಿ ವ್ಯವಸ್ಥೆಯನ್ನು ರದ್ದು ಮಾಡಿರುವ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಹಿಂದುಳಿದ ವರ್ಗದವರ ಮೀಸಲಾತಿ ಸಂವಿಧಾನ ಬದ್ಧ ಹಕ್ಕಾಗಿದ್ದು, ಅದನ್ನು ಕಸಿಯುವ ಪ್ರಯತ್ನವನ್ನು ಬಿಜೆಪಿ ಪಕ್ಷ ವಿರೋಧಿಸಲಿದೆ, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದೇ ಮಾದರಿಯ ಮೀಸಲಾತಿಯನ್ನು ತರಲು ಯೋಜನೆ ರೂಪಿಸಿದೆ. ಹಾಗೊಮ್ಮೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಿದರೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗಲಿದೆ. ಎಂತಹ ಸಂದರ್ಭ ಎದುರಾದರೂ ಸಂವಿಧಾನ ವಿರೋಧಿ ಮೀಸಲಾತಿ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಸದಸ್ಯ ಡಾ.ಸಿದ್ದರಾಮಯ್ಯ, ರೈತಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ್ ಜಯರಾಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ಆರ್.ನರಸಿಂಹಾಚಾರ್, ಪ್ರಧಾನ ಕಾರ್ಯದರ್ಶಿ ವಾಸು, ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ನಾಗಮಂಗಲ ನರಸಿಂಹಮೂರ್ತಿ, ಆನಂದ್, ಕೇಶವ, ಕೆಂಪಬೋರಯ್ಯ, ಸಿ.ಟಿ.ಮಂಜುನಾಥ್, ಬಿ.ಟಿ.ಶಿವಲಿಂಗಯ್ಯ, ನಿತ್ಯಾನಂದ, ಕೃಷ್ಣ, ಧನಂಜಯ, ಸತೀಶ್ ಮದ್ದೂರು, ಪೀ.ಹಳ್ಳಿ ರಮೇಶ್, ಸಂತೋಷ್‌ಕುಮಾರ್, ರಮೇಶ್ ವಿಶ್ವಕರ್ಮ, ಹೊಸಹಳ್ಳಿ ಶಿವು, ಹರ್ಷ, ಪ್ರಸನ್ನ ಇತರರಿದ್ದರು.