

ಯಲ್ಲಾಪುರ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಂಧಿಸಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಕರ್ನಾಟಕ ರಾಜ್ಯ ತುರ್ತು ಪರಿಸ್ಥಿತಿಯತ್ತ ಸಾಗಿದೆ. ಮಿಥ್ಯಾರೋಪ ಮಾಡಿ, ದೊಡ್ಡ ನಾಟಕ ರೂಪಿಸಿ ಸಿ.ಟಿ. ರವಿ ಅವರನ್ನು ಬಂಧಿಸಿದೆ. ರವಿ ಅವರು ಅವಾಚ್ಯ ಶಬ್ದ ಬಳಸಿದ್ದು ಸದನದಲ್ಲಿ ದಾಖಲೆಯಾಗಿಲ್ಲ. ಸಭಾಪತಿಗಳೂ ಅದನ್ನು ಸ್ಪಷ್ಟಪಡಿಸಿದ್ದಾರೆ. ಆದರೂ ಸುಳ್ಳು ಆರೋಪ ಮಾಡಲಾಗುತ್ತಿದೆ. ಜನರ ದಿಕ್ಕುತಪ್ಪಿಸಲು ಸರ್ಕಾರ ಹೊರಟಿದೆ. ಇದೇ ಪ್ರವೃತ್ತಿ ಮುಂದುವರಿದರೆ ಪಕ್ಷ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ವಿರೋಧ ಪಕ್ಷದ ನಾಯಕರು ನಮ್ಮ ಸಂಸದರ ಮೇಲೆ ಹಲ್ಲೆ ನಡೆಸುತ್ತಾರೆ. ನಮ್ಮ ವಿಧಾನಸೌಧದಲ್ಲಿ ಕಲಾಪ ನಡೆಯುವಾಗ ಗೂಂಡಾಗಳು ಒಳ ಪ್ರವೇಶಿಸುತ್ತಾರೆ. ಕಾನೂನನ್ನು ಗಾಳಿಗೆ ತೂರಿ ನಮ್ಮ ನಾಯಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಗೂಂಡಾಗಿರಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಹನೆಯ ಕಟ್ಟೆ ಒಡೆದರೆ ಕಾಂಗ್ರೆಸ್ ಸರ್ಕಾರ ಉಳಿಯುವುದಿಲ್ಲ ಎಂದರು.
ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿದರು. ಉಪಾಧ್ಯಕ್ಷ ಅಶೋಕ ಚಲವಾದಿ, ಶ್ರೀನಿವಾಸ ಹೆಬ್ಬಾರ್, ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ, ಶಿವಾಜಿ ನರಸಾನಿ, ಪ್ರಮುಖರಾದ ರೇಖಾ ಹೆಗಡೆ, ಪ್ರಸಾದ ಹೆಗಡೆ, ನಟರಾಜ ಗೌಡರ್, ರಾಘವೇಂದ್ರ ಭಟ್ಟ, ಚಂದ್ರಕಲಾ ಭಟ್ಟ, ಕಲ್ಪನಾ ನಾಯ್ಕ, ಗೋಪಾಲಕೃಷ್ಣ ಗಾಂವ್ಕರ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಕೆ.ಜಿ. ನಾಯ್ಕ, ರಾಜೇಂದ್ರ ನಾಯ್ಕ ಇದ್ದರು.