

ಯಲ್ಲಾಪುರ: ಬಿಜೆಪಿ ತಾಲೂಕು ಘಟಕದ ವತಿಯಿಂದ ತಾಲೂಕಿನ ಹಾಸಣಗಿ, ಕಂಪ್ಲಿ, ಉಮ್ಮಚಗಿ, ಕುಂದರಗಿ ಗ್ರಾಮ ಪಂಚಾಯಿತಿಗಳ ಕಚೇರಿ ಎದುರು ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ವಿರುದ್ಧ ಪಕ್ಷದ ಕಾರ್ಯಕರ್ತರು ಘೊಷಣೆ ಕೂಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ ಕಾಂಗ್ರೆಸ್ ರಾಜ್ಯವನ್ನು ದಿವಾಳಿಯತ್ತ ಕೊಂಡೊಯುತ್ತಿದೆ. ಇದೊಂದು ತುಷ್ಠೀಕರಣದ ಸರ್ಕಾರ, ಭ್ರಷ್ಟಾಚಾರದ ಸರ್ಕಾರ. ವಿಕೇಂದ್ರೀಕರಣ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದ ಸರ್ಕಾರ. ಆಡಳಿತ ಪಕ್ಷದ ಶಾಸಕರೇ ಮನೆ ಹಂಚಿಕೆಯಲ್ಲಿ ಅವ್ಯವಹಾರವಾಗಿದೆ ಎಂದು ಹೇಳಿದ್ದು, ಶಾಸಕರೇ ಚರಂಡಿ ಮಾಡಲು ಹಣ ಇಲ್ಲ ಎನ್ನುತ್ತಿರುವುದು ಈ ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ’ ಎಂದು ಟೀಕಿಸಿದರು.
ರಾಜ್ಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ರೇಖಾ ಹೆಗಡೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಿದ್ದ ನರ್ಸಿಂಗ್ ತರಬೇತಿಯನ್ನು ಕಾಂಗ್ರೆಸ್ ಬಂದ್ ಮಾಡಿ, ಪದವಿ ಪಡೆದ ಸಾವಿರಾರು ಮಹಿಳೆಯರ ಸಂತೋಷ ಕಿತ್ತುಕೊಂಡಿದೆ ಎಂದು ಆಕ್ಷೇಪಿಸಿದರು. ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿದರು.
ಪಕ್ಷದ ವಿವಿಧ ಸ್ಥರದ ಮುಖಂಡರಾದ ನಟರಾಜ ಗೌಡರ, ರೇಣುಕಾ ಭೋವಿವಡ್ಡರ, ಗಣೇಶ ಹೆಗಡೆ, ಪವನಕುಮಾರ ಕೆಸರಕರ, ವೀನೇಶ ಭಟ್ಟ ಮಾಳಕೊಪ್ಪ, ಬಾಬಣ್ಣ ಪತ್ರೇಕರ, ರಘುಪತಿ ಹೆಗಡೆ, ಸದಾಶಿವ ಚಿಕ್ಕೊತ್ತಿ, ಪ್ರಸನ್ನ ಭಟ್ಟ ಹಿತ್ಲಳ್ಳಿ, ನಾಗರಾಜ ಭೋವಿವಡ್ಡರ, ಪರಶುರಾಮ ಸಿದ್ದಿ, ದಿವಾಕರ ಪೂಜಾರಿ, ಗಣಪತಿ ಶಂಕರಗದ್ದೆ, ರಾಘು ಹೆಗಡೆ ಕುಂದರಗಿ, ರಾಮು ಹೆಗಡೆ ಇತರರಿದ್ದರು.