

ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯ ರದ್ದುಗೊಳಿಸುವ ರಾಜ್ಯಸರ್ಕಾರ ನಿರ್ಧಾರ ಖಂಡಿಸಿ ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನಿಂದ ಪ್ರತಿಭಟನೆ ನಡೆಸಲಾಯಿತು.
ಸರ್‌ಎಂವಿ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ವಿವಿ ರದ್ದುಗೊಳಿಸಲು ಹಣದ ಕೊರತೆಯ ನೆಪ ನೀಡಿರುವ ಹಿನ್ನೆಲೆಯಲ್ಲಿ ಜೋಳಿಗೆ ಹಿಡಿದು ಭಿಕ್ಷೆ ಬೇಡಿ ವ್ಯಂಗ್ಯವಾಡಲಾಯಿತು. ಬಳಿಕ ಮನವಿ ಹಾಗೂ ಸಂಗ್ರಹಿಸಿದ ಹಣವನ್ನು ಜಿಲ್ಲಾಡಳಿತದ ಮೂಲಕ ರಾಜ್ಯಸರ್ಕಾರಕ್ಕೆ ಕಳುಹಿಸಲಾಯಿತು. ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮನವಿ ಸ್ವೀಕರಿಸಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಭಿಕ್ಷೆ ಬೇಡಿಯಾದರೂ ಮಂಡ್ಯ ವಿಶ್ವವಿದ್ಯಾಲಯ ಸೇರಿದಂತೆ ಸರ್ಕಾರ ಮುಚ್ಚಲು ಉದ್ದೇಶಿಸಿರುವ ಎಲ್ಲ 9 ವಿಶ್ವವಿದ್ಯಾಲಯಗಳನ್ನು ಉಳಿಸೋಣ. ವಿವಿ ಉಳಿಸುವ ಅಭಿಯಾನ ಮಂಡ್ಯದಿಂದಲೇ ಪ್ರಾರಂಭವಾಗಿದ್ದು, ಎಲ್ಲ ಜಿಲ್ಲೆಗಳಲ್ಲೂ ಎನ್‌ಡಿಎ ಮೈತ್ರಿಕೂಟ ಹಾಗೂ ಸಂಘಟನೆಗಳೊಡಗೂಡಿ ಹೋರಾಟ ಮಾಡುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ಮಂಡ್ಯ, ಚಾಮರಾಜನಗರ, ಕೊಡಗು ಸೇರಿದಂತೆ 9 ಜಿಲ್ಲೆಗಳಲ್ಲಿ ಸ್ಥಾಪಿಸಿರುವ ವಿಶ್ವವಿದ್ಯಾಲಯಗಳಿಂದ ಲಾಭವಿಲ್ಲ. ಹೀಗಾಗಿ ಅಗತ್ಯವಿಲ್ಲ ಎಂದಿದ್ದಾರೆ. ನಿಮಗೆ ಆದಾಯ ಬೇಕಾದರೆ ಎಲ್ಲ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಮುಚ್ಚಿ ಬಾರ್ ತೆರೆಯಿರಿ, ಒಳ್ಳೆಯ ಆದಾಯ ಬರುತ್ತದೆ ಎಂದು ಲೇವಡಿ ಮಾಡಿದರು.
ಶಿಕ್ಷಣ ವ್ಯಾಪಾರ ಮತ್ತು ಉದ್ಯಮವಲ್ಲ. ನಮ್ಮ ದೇಶದ ಆಸ್ತಿ. ಹೆಚ್ಚು ವಿದ್ಯಾವಂತರಾದರೆ ಬೇರೆ ಬೇರೆ ದೇಶಗಳ ಜತೆ ಪೈಪೋಟಿ ನಡೆಸಬಹುದು. 9 ವಿಶ್ವವಿದ್ಯಾಲಯಗಳನ್ನು ನಡೆಸಲು 252 ಕೋಟಿ ರೂ. ಬೇಕಾಗಿದೆ. 4 ಲಕ್ಷ ರೂ ಬಜೆಟ್ ಮಂಡಿಸುವ ರಾಜ್ಯ ಸರ್ಕಾರಕ್ಕೆ 252 ಕೋಟಿ ರೂ.ಗಳನ್ನು ನೀಡಲು ಆಗಲ್ಲವೇ?. ಗ್ರಾಮೀಣ ಜನ ನಮ್ಮೂರಿಗೆ ಶಾಲೆ, ಆಸ್ಪತ್ರೆ ಬೇಕು ಎಂದು ಕೇಳುತ್ತಾರೆ. ಆದರೆ, ಈ ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿದೆ. ವಿಶ್ವವಿದ್ಯಾಲಯಕ್ಕೆ ಕೇಂದ್ರ ಮತ್ತು ವಿವಿಗೆ ಒಳಪಡುವ ಕಾಲೇಜುಗಳಿಂದಲೇ ಹಣ ಬರುತ್ತದೆ. ಅದರಿಂದಲೇ ನಡೆಸಬಹುದು. ಶಿಕ್ಷಣ ಮಾರಾಟದ ವಸ್ತು ಆಗಬಾರದು. ಜಿಲ್ಲೆಯಲ್ಲಿ ಒಂದು ವಿವಿ ಇದ್ದರೆ ಅದು ಒಂದು ಗೌರವ ಎಂದರು.
ಆರ್ಥಿಕ ತಜ್ಞ ಎಂದ್ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಗಳಿಂದ ಲಾಭವಿಲ್ಲ ಎಂದು ಮುಚ್ಚಲು ಹೊರಟಿದ್ದಾರೆ. ಸರ್ಕಾರದ ಖಜಾನೆಗೇ ಹೆಗ್ಗಣಗಳು ಹೊಕ್ಕಿವೆ. ಕಾಂಗ್ರೆಸ್ ಸರ್ಕಾರ ಬಂದು ವಿದ್ಯೆಯನ್ನು ಕಿತ್ತಾಕಿದೆ. ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಮುಚ್ಚಿರುವ ಬಾರ್‌ಗಳಿಗೆ ಲೈಸೆನ್ಸ್ ನೀಡಿ ತೆರೆಸುತ್ತಿದ್ದರೆ, ಇತ್ತ ಸರ್ಕಾರ ತೆರೆದಿರುವ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿದೆ ಎಂದು ವ್ಯಂಗ್ಯವಾಡಿದ ಆರ್.ಅಶೋಕ್, ಜಿಲ್ಲೆಯಲ್ಲಿ 6 ಜನ ಕಾಂಗ್ರೆಸ್ ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಇವರಿಗೆ ಒಂದು ವಿಶ್ವವಿದ್ಯಾಲಯವನ್ನು ಉಳಿಸಲು ಯೋಗ್ಯತೆ ಇಲ್ಲವಾದರೆ, ಏಕೆ ಅಧಿಕಾರದಲ್ಲಿರಬೇಕೆಂದು ವಾಗ್ದಾಳಿ ನಡೆಸಿದರು.
ಧರಣಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಮುಖಂಡರಾದ ಎಸ್.ಸಚ್ಚಿದಾನಂದ ಇಂಡುವಾಳು, ಡಾ.ಸಿದ್ದರಾಮಯ್ಯ, ಅಶೋಕ್ ಜಯರಾಂ, ಬಿ.ಆರ್.ರಾಮಚಂದ್ರ, ಇಂದ್ರೇಶ್, ಡಿ.ರಮೇಶ್, ಅಂಬುಜಮ್ಮ, ಸಿ.ಟಿ.ಮಂಜುನಾಥ್, ಕಂಸಾಗರ ರವಿ, ಸಾತನೂರು ಜಯರಾಮು, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ, ಶಿವಕುಮಾರ್ ಆರಾಧ್ಯ ಇತರರಿದ್ದರು.
ಭ್ರಷ್ಟ ರಾಜ್ಯ ಸರ್ಕಾರ ಕಿತ್ತೊಗೆಯಿರಿ
ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಾಪಿಸಿದ್ದ 9 ವಿಶ್ವವಿದ್ಯಾಲಯಗಳಿಗೂ ನಯಾ ಪೈಸೆ ಕೊಟ್ಟಿಲ್ಲ. ಶಿಕ್ಷಣವನ್ನು ವ್ಯಾಪಾರ ಎಂದು ತಿಳಿದಿರುವ ಇಂತಹ ಸರ್ಕಾರ ಇರಬಾರದು, ಈ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯಗಳನ್ನು ಮುಚ್ಚಲು ಹೊರಟಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಎಂತಹ ಹೋರಾಟಕ್ಕೂ ಸಿದ್ಧರಾಗಿರಿ, ಮಂಡ್ಯ ಜಿಲ್ಲೆಯಿಂದಲೇ ಹೋರಾಟ ಆರಂಭವಾಗಲಿ, ನಮ್ಮ ಭವಿಷ್ಯದ ಹೋರಾಟವಾಗಬೇಕು. ತೆಲಂಗಾಣ ರಾಜ್ಯವಾಗಿ ಪರಿವರ್ತನೆಯಾಗಲು ಉಸ್ಮಾನಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾರಣ. ತುರ್ತು ಪರಿಸ್ಥಿತಿ ಘೋಷಣೆಯಾದಾಗ ಹಾಸ್ಟೆಲ್‌ನಿಂದ ಹೋರಾಟ ಆರಂಭವಾಗಿ ಇಡೀ ದೇಶವ್ಯಾಪಿ ಹಬ್ಬಿತು. ವಿಶ್ವವಿದ್ಯಾಲಯಗಳ ಉಳಿವಿಗಾಗಿ ಅಂತಹ ಹೋರಾಟ ಮಂಡ್ಯದಿಂದಲೇ ಪ್ರಾರಂಭವಾಗಬೇಕಿದೆ ಎಂದರು.
ಕಾನೂನಾತ್ಮಕವಾಗಿ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಆಗಲ್ಲ. ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಗತಿ ಏನಾಗಬೇಕು?. ನಮ್ಮ ಭವಿಷ್ಯ ಉಜ್ವಲವಾಗಲು ವಿವಿ ಉಳಿಯಬೇಕು. ಪದವಿ ಇದ್ದರೆ ಸಾಲದು, ಗುಣಮಟ್ಟದ ಶಿಕ್ಷಣ ಬೇಕು. ಮಂಡ್ಯ ಸುವರ್ಣ ಜಿಲ್ಲೆಯಾಗಬೇಕಾದರೆ ವಿಶ್ವವಿದ್ಯಾಲಯ ಉಳಿಯಬೇಕು. ಇದಕ್ಕಾಗಿ ವಿದ್ಯಾರ್ಥಿಗಳು ಹೋರಾಟಕ್ಕೆ ಧುಮುಕಬೇಕೆಂದು ಮನವಿ ಮಾಡಿದರು.