ರಾಜ್ಯಸರ್ಕಾರ ವಿರುದ್ಧ ಭ್ರಷ್ಟಾಚಾರ ಆರೋಪ: ಪಾಂಡವಪುರದಲ್ಲಿ ಬಿಜೆಪಿ ಪ್ರತಿಭಟನೆ

BJP protests against state Congress government mandya
Published on

ಪಾಂಡವಪುರ: ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಅನುಸರಿಸುವುದರ ಜತೆಗೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ನೇತೃತ್ವದಲ್ಲಿ ಐದು ದೀಪದ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಾಜ್ಯಸರ್ಕಾರ ಹಾಗೂ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ದುರಾಡಳಿತ ಮಿತಿ ಮೀರಿದೆ. ರೈತರಿಗೆ ಅನುಕೂಲವಾಗಲೆಂದು ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸಮ್ಮಾನ್, ರೈತಸಿರಿ ಯೋಜನೆಗಳನ್ನು ಹಿಂಪಡೆದಿದೆ. ಅಂತೆಯೇ ದಲಿತ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ 11 ಸಾವಿರ ಕೋಟಿ ರೂಗಳನ್ನು ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಯೋಜನೆ ದುರ್ಬಳಕೆ ಮಾಡಿಕೊಂಡಿದೆ. ಮಾತ್ರವಲ್ಲದೆ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿರುವ ಉಗ್ರ ಸಂಘಟನೆ ಹಮಾಸ್‌ಗೆ ಗೆ ಬೆಂಬಲ ನೀಡಿದೆ ಎಂದು ಆರೋಪಿಸಿದರು.

ಇನ್ನು ಪ್ರಗತಿಪರ ಹೋರಾಟಗಾರ ಎಂಬ ಮುಖವಾಡ ತೊಟ್ಟು ಸಮಾಜದಲ್ಲಿ ಶಾಂತಿ ಕದಡುವ ಕೆಲಸವನ್ನು ಭಗವಾನ್ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯವನ್ನು ಪದೇ ಪದೇ ನಿಂದಿಸುವ ಹುನ್ನಾರ ನಡೆಯುತ್ತಿದೆ. ಅವರ ವಿರುದ್ಧ ಕಾನೂನು ಕ್ರಮವಾಗಬೇಕು. ಆತ ಈ ಕೂಡಲೇ ಕ್ಷಮೆಯಾಚಿಸಬೇಕು.ಇಲ್ಲವಾದರೆ ಮಂಡ್ಯ ಜಿಲ್ಲೆಗೆ ಬಂದಾಗ ಚಪ್ಪಲಿಯಲ್ಲಿ ಹೊಡೆದು ಬುದ್ಧಿ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮೈಷುಗರ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ತಾಲೂಕು ಅಧ್ಯಕ ಆಶೋಕ್, ಪ್ರಧಾನ ಕಾರ್ಯದರ್ಶಿ ಧನಂಜಯ, ಸೋಮಶೇಖರ್, ನಿರಂಜನ್‌ಬಾಬು, ಪುರುಷೋತ್ತಮ, ಶ್ರೀನಿವಾಸ್ ನಾಯಕ್, ತಮ್ಮಣ್ಣ, ಕೆನ್ನಾಳು ಚಿಕ್ಕಣ್ಣ, ರಾಮು, ನವೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net