

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ವಿರೋಧಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸೋಮವಾರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು.
ಜಿಲ್ಲಾ ಬಿಜೆಪಿ ಘಟಕ, ರೈತ ಮೋರ್ಚಾ ಹಾಗೂ ಎಸ್ಸಿ ಮೋರ್ಚಾ ಘಟಕದ ಸಹಯೋಗದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರಿನಿಂದ ಮೆರವಣಿಗೆ ಹೊರಟ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಅಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ರೈತ ಮತ್ತು ಜನಪರ ಯೋಜನೆಗಳನ್ನು ರದ್ದು ಮಾಡುವ ಮೂಲಕ ಜನ ವಿರೋಧಿ ಆಡಳಿತ ನಡೆಸುತ್ತಿದೆ. ಗ್ಯಾರಂಟಿ ಯೋಜನೆಯ ನೆಪದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ್ದ 11 ಸಾವಿರ ಕೋಟಿ ರೂಗಳನ್ನು ದುರ್ಬಳಕೆ ಮಾಡಿಕೊಂಡಿದೆ. ರೈತರಿಗೆ ಅನುಕೂಲವಾಗಿದ್ದ ಎಪಿಎಂಸಿ ಕಾಯ್ದೆ, ಕಿಸಾನ್ ಸಮ್ಮಾನ್ ಯೋಜನೆ ರದ್ದುಗೊಳಿಸುವ ಮೂಲಕ ದ್ರೋಹ ಮಾಡಿದೆ ಎಂದು ಆರೋಪಿಸಿದರು.
11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೈತ ವಿದ್ಯಾನಿಧಿ ಯೋಜನೆಯನ್ನು ರದ್ದುಪಡಿಸುವ ಮೂಲಕ ಬಡ ಮಕ್ಕಳಿಗೆ ಅನ್ಯಾಯವೆಸಗಿದೆ. ಗೋಹತ್ಯೆ ತಡೆ ಹಾಗೂ ಜಾನುವಾರು ಸಂರಕ್ಷಿಸಲು ಪ್ರತಿ ಜಿಲ್ಲೆಗೊಂದು ಗೋಶಾಲೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು. ಅಕ್ರಮ ಗೋ ಸಾಗಾಟ ಮಾಡುವವರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಯೋಜನೆಯನ್ನು ಹಿಂಪಡೆಯಲಾಗಿದೆ. ರಾಜ್ಯದ ಸುಮಾರು 50 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಭೂ ಸಿರಿ ಯೋಜನೆಯಲ್ಲಿ 10 ಸಾವಿರ ರೂ ಹೆಚ್ಚುವರಿ ಸಹಾಯಧನ ನೀಡುವುದನ್ನು ಸ್ಥಗಿತ ಮಾಡಲಾಗಿದೆ ಎಂದು ದೂರಿದರು.
ಇದಲ್ಲದೆ ರೈತರಿಗೆ ಪ್ರತಿ ಎಕರೆಗೆ 250 ರೂ ನಂತೆ 5 ಎಕರೆಗೆ 1,250 ರೂಗಳ ಡೀಸೆಲ್ ಸಹಾಯಧನ ನೀಡುವ ರೈತ ಶಕ್ತಿ ಯೋಜನೆಯನ್ನು ರದ್ದುಪಡಿಸುತ್ತಿದೆ. ಇದಲ್ಲದೆ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿೃಸಿದ್ದು, ನೀರಾವರಿ ಅನುದಾನವನ್ನು 19 ಸಾವಿರ ಕೋಟಿ ರೂಗೆ ಇಳಿಸಿದೆ. ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು ಮಾಡಿರುವುದು ಸರಿಯಲ್ಲ. ಈ ಕಾಯ್ದೆಯಲ್ಲಿ ಯಾರು ಬೇಕಾದರೂ ಕೃಷಿ ಜಮೀನನ್ನು ಕೊಂಡುಕೊಳ್ಳಬಹುದು ಎಂಬ ನಿಯಮವಿತ್ತು. ಇದರಿಂದ ಕೃಷಿ ಜಮೀನುಗಳ ಮೌಲ್ಯ ಹೆಚ್ಚಾಗಿತ್ತು. ಕೃಷಿ ಪದವೀಧರ ವಿದ್ಯಾರ್ಥಿಗಳು ಕೂಡ ಜಮೀನನ್ನು ಖರೀದಿಸುವ ಮೂಲಕ ಹೊಸ ಕೃಷಿ ಪದ್ಧತಿಗಳ ಮೂಲಕ ಕೃಷಿಯನ್ನು ಮಾಡಲು ಅನುಕೂಲವಾಗಿತ್ತು. ಆದರೆ ಕಾಯ್ದೆ ರದ್ದು ಮಾಡಿರುವುದರಿಂದ ಕೃಷಿ ಭೂಮಿಯ ದರ ಕುಸಿದು ಕೃಷಿಕರಿಗೆ ಹೊಡೆತ ನೀಡಲಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜಿಲ್ಲಾಧ್ಯಕ್ಷ ಕೆ.ಸಿ.ಜೋಗಿಗೌಡ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ನಿತ್ಯಾನಂದ, ಮುಖಂಡರಾದ ಬೇಕರಿ ಅರವಿಂದ್, ಪ.ನಾ.ಸುರೇಶ್, ಹನಿಯಂಬಾಡಿ ನಾಗರಾಜು, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಮಂಜುನಾಥ್, ವಿವೇಕ್, ಚಾಮರಾಜು, ರವಿಕುಮಾರ್ ಡಣಾಯಕನಪುರ ಇತರರಿದ್ದರು.