

ಮಡಿಕೇರಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಜಮಾಯಿಸಿದ ಕಾರ್ಯಕರ್ತರು ಸೈಕಲ್ ತುಳಿಯುದರ ಜತೆಗೆ ಕಾರಿಗೆ ಹಗ್ಗಕಟ್ಟಿ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಎಳೆಯಲಾಯಿತು. ನಂತರ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ದಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಜೂ.೧೫ ಕರ್ನಾಟಕಕ್ಕೆ ಕರಾಳದಿನವಾಗಿದೆ. ಕಾರಣ, ಒಂದು ವರ್ಷ ಪೂರೈಸಿದ ಕಾಂಗ್ರೆಸ್ ಸರ್ಕಾರ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಹಿನ್ನೆಲೆ ಪ್ರೆಟೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿ ಲೂಟಿ ಹೊಡೆಯಲು ಆರಂಭಿಸಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಹೇಳೋದೊಂದು ಮಾಡೋದೊಂದಾಗಿದೆ. ಪಕ್ಕದ ರಾಜ್ಯದಲ್ಲಿ ಪ್ರೆಟೋಲ್, ಡೀಸೆಲ್ ಬೆಲೆ ಹೆಚ್ಚಿದೆ. ಆದ್ದರಿಂದ ನಾವು ಮಾಡಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಪಕ್ಕದ ರಾಜ್ಯದಲ್ಲಿ ೧೦೦ ರೂ ಇನ್ನು ದಾಟಿಲ್ಲ. ಮುಖ್ಯಮಂತ್ರಿಗಳು ಸುಳ್ಳು ಹೇಳುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದರು.
ಬೊಮ್ಮಾಯಿ ಸರ್ಕಾರವಿದ್ದ ಸಂದರ್ಭದಲ್ಲಿ ಬೆಲೆ ಕಡಿಮೆ ಮಾಡಿತ್ತು. ಆದರೆ, ಇಂದು ಏಕಾಏಕಿ ಏರಿಕೆ ಮಾಡುತ್ತಿದ್ದಾರೆ. ಸರ್ಕಾರ ಇಂದು ದೀವಾಳಿ ಎದ್ದು ಹೋಗಿದ್ದು, ದರಿದ್ರ ಸರ್ಕಾರವಾಗಿದೆ. ಗ್ಯಾರೆಂಟಿ ಗ್ಯಾರೆಂಟಿ ಎಂದು ಹೇಳಿ ಸಂಬಳ ಕೊಡಲು ಇವರಲ್ಲಿ ಹಣವಿರುದಿಲ್ಲ. ಬೆಲೆ ಏರಿಕೆಯೇ ಸರ್ಕಾರದಿಂದ ನೀಡುತ್ತಿರುವ ೬ನೇ ಗ್ಯಾರೆಂಟಿಯಾಗಿದೆ ಎಂದರು.
ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರತಿಯೊಬ್ಬರು ಖಂಡಿಸುವಂತಾಗಬೇಕು. ಬೆಲೆಏರಿಕೆ ಮುಂಬರುವ ದಿನಗಳಲ್ಲಿ ದಿನಬಳಕೆ ವಸ್ತುಗಳ ಮೇಲೆ ಇದು ಪರಿಣಾಮ ಬೀರಲಿದೆ. ಕೇಂದ್ರ ಸರ್ಕಾರ ಏನಾದರು ಹೆಚ್ಚಳ ಮಾಡುವ ಸಂದರ್ಭ ಬೊಬ್ಬೆಹಾಕುವ ಕಾಂಗ್ರೆಸಿಗರು ಈಗ ಯಾಕೆ ಹಾಕುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಈ ಸರ್ಕಾರವಿದ್ದಷ್ಟು ದಿನ ಯಾರಿಗೂ ನೆಮ್ಮದಿಯಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದೊಂದು ಕೊಲೆಗಡುಕರ ಬೆಂಬಲಿತ ಸರ್ಕಾರವಾಗಿದೆ ಎಂದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಚುನಾವಣೆ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರೆಟ್ರೋಲ್, ಗ್ಯಾಸ್‌ದರವನ್ನು ಇಳಿಸುತ್ತೇವೆ ಎಂದು ಹೇಳಿದ್ದರು. ಆದರೆ, ಇಂದು ದರ ಏರಿಕೆ ಮಾಡಿದ್ದಾರೆ. ಇದರಿಂದ ಆಟೋ, ಬಸ್, ತರಕಾರಿ ಇತ್ಯಾದಿ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಇವೆಲ್ಲದ ಹೊರೆ ಬಡ ಜನರ ಮೇಲೆ ಬೀಳುತ್ತದೆ ಎಂದ ಅವರು, ಇದೊಂದು ಭ್ರಷ್ಟಸರ್ಕಾರ. ವಾಲ್ಮಿಕಿ ನಿಗಮದ ಹಣವನ್ನು ಲೂಟಿ ಮಾಡಿ, ತೆಲಂಗಾಣ ಚುನಾವಣೆಗೆ ಕಳುಹಿಸಿದ್ದಾರೆ. ಸಿಬಿಐಗೆ ಪ್ರಕರಣ ಹಸ್ತಾಂತರದ ಬೆನ್ನಲ್ಲೆ ನಾಗೇಂದ್ರರವರು ರಾಜೀನಾಮೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ಬಂದ ನಂತರ ಮರ್ಡರ್‌ಗಳು ಹೆಚ್ಚಾಗಿದೆ. ರಾಜ್ಯ ಸರ್ಕಾರ ಎಲ್ಲವನ್ನು ನಿಭಾಹಿಸುವಲ್ಲಿ ಫೇಲ್ ಆಗಿದ್ದು, ಸರ್ಕಾರ ಮುಂದುವರೆಯದೇ ಸ್ವತಃ ಅವರೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ಸುನೀಲ್ ಸುಬ್ರಮಣಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ರಾಬೀನ್ ದೇವಯ್ಯ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಅರುಣ್ ಕುಮಾರ್, ಅರುಣ್ ಶೆಟ್ಟಿ, ಮನುಮಂಜುನಾಥ್, ಜಗದೀಶ್ ಇತರರಿದ್ದರು.