ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

IMG-20240620-WA0028
ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಬೇಲೂರಿನ ನೆಹರು ವೃತ್ತದಲ್ಲಿ ವಾಹನಗಳ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.
Published on

ಬೇಲೂರು: ರಾಜ್ಯ ಸರ್ಕಾರ ಇಂಧನ ಬೆಲೆ ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹೊರಿಸಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ಶಾಸಕ ಎಚ್.ಕೆ.ಸುರೇಶ್ ಅವರ ನೇತೃತ್ವದಲ್ಲಿ ಪಟ್ಟಣದ ನೆಹರು ವೃತ್ತದಲ್ಲಿ ವಾಹನಗಳ ಸಂಚಾರ ತಡೆಯುವ ಮೂಲಕ ಗುರುವಾರ ಪ್ರತಿಭಟಿಸಿ ತಹಸೀಲ್ದಾರ್ ಎಂ.ಮಮತಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟ ಸರ್ಕಾರವೆಂದರೆ ಅದು ಕಾಂಗ್ರೆಸ್ ಸರ್ಕಾರ. ಜನರಿಗೆ ಪುಕ್ಕಟೆ ಭಾಗ್ಯಗಳನ್ನು ತಲುಪಿಸಲು ಆರ್ಥಿಕ ಸಮಸ್ಯೆ ಇರುವುದರಿಂದ ದಿಢೀರ್ ಇಂಧನ ಬೆಲೆ ಏರಿಸಿ ರಾಜ್ಯದ ಜನತೆಗೆ ಬರೆ ಎಳೆದಿದ್ದಾರೆ. ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ತಲುಪಿಸಲು ಸಾಧ್ಯವಾಗದೆ ತೈಲ ಬೆಲೆ ಏರಿಸಿದ್ದಾರೆ. ಜತೆಗೆ ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ ಎಂಬುದು ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಎರಡಂಕಿ ದಾಟಲು ಅವರಿಂದ ಸಾಧ್ಯವಾಗಿಲ್ಲ. ಅವರದೇ ಸರ್ಕಾರ ಇದ್ದು 135 ಶಾಸಕರನ್ನು ಹೊಂದಿದ್ದರೂ ಸರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಜನತೆೆ ಈ ಸರ್ಕಾರದ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್ ಮಾತನಾಡಿ, ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹಗಲು ಕನಸು ಕಂಡಿದ್ದರು. ಆದರೆ ನಮ್ಮ ನಾಯಕರು ಮಾಡುತ್ತಿರುವ ದೇಶದ ಅಭಿವೃದ್ಧಿ ನೋಡಿ ಜನ ಏನ್‌ಡಿಎ ಮಿತ್ರ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ. ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನ ಬರುತ್ತದೆಂದು ಸಿಎಂ, ಡಿಸಿಎಂ ಹೇಳಿದ್ದರು. ಅವರ ಅತಿಯಾದ ಭರವಸೆ ಹುಸಿಯಾಗಿದೆ. ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡುವಲ್ಲೇ ಕಾಲಹರಣ ಮಾಡುತ್ತಿದ್ದಾರೆ. ತೈಲ ಬೆಲೆ ಏರಿಸಿ ರಾಜ್ಯದ ಜನತೆ ಮೇಲೆ ಹೊರೆ ಹೊರಿಸಿದ್ದಾರೆ. ಈ ಕೂಡಲೇ ಏರಿಸಿರುವ ಬೆಲೆಯನ್ನು ಇಳಿಸದಿದ್ದರೆ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ತಾಲುಕು ಬಿಜೆಪಿ ಅಧ್ಯಕ್ಷ ಅಡಗೂರು ಆನಂದ್ ಮಾತನಾಡಿ, ಕೇವಲ ಗ್ಯಾರಂಟಿ ಯೋಜನೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಾ ಕಾಲ ಕಳೆಯುತ್ತಿರುವ ಸರ್ಕಾರ ರಾಜ್ಯದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವಾಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಸಿರುವುದು ಸರಿಯಲ್ಲ. ಕೇಳಿದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದು, ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂದರು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ಪರ್ವತಯ್ಯ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಗಣೇಶ್, ನಗರಾಧ್ಯಕ್ಷ ವಿನಯ್, ಮುಖಂಡರಾದ ಜಿ ಕೆ ಕುಮಾರ್, ಅಭಿಗೌಡ, ಶಿವಣ್ಣ, ಸಂಗಪ್ಪ, ತೀಥರ್ಂಕರ, ಕೇಬಲ್ ರಾಜಣ್ಣ, ಉಮೇಶ್, ಶ್ರೇಯಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net