ಮುಡಾ-ವಾಲ್ಮೀಕಿ ನಿಗಮದ ಹಗರಣ ಖಂಡಿಸಿ ಬಿಜೆಪಿ ಪ್ರತಿಭಟನೆ, ರಾಜ್ಯಪಾಲರ ವಿರುದ್ಧ ನಿಂದನೆಗೆ ತೀವ್ರ ಖಂಡನೆ

BJP PROTEST AGAINST CM
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆಯನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿದರು. ಎಸ್.ಕೆ.ಬೆಳ್ಳುಬ್ಬಿ, ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಯಿತು. ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಮಾರ್ಗದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಮೊಳಗಿಸಲಾಯಿತು.

ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ್ಮ ಸಂವಿಧಾನ ಬದ್ಧ ಕರ್ತವ್ಯ ನಿಭಾಯಿಸಿದ್ದಾರೆ. ಆದರೆ, ದಲಿತ ರಾಜ್ಯಪಾಲರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು, ಮುಖಂಡರು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಏಕವಚನ ಪ್ರಯೋಗ ಮಾಡುವ ಮೂಲಕ ಸಂವಿಧಾನ ಹುದ್ದೆಯಲ್ಲಿರುವ ಗೌರವಾನ್ವಿತ ರಾಜ್ಯಪಾಲರನ್ನು ನಿಂದಿಸಿರುವುದು ಖಂಡನೀಯ ಎಂದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಎದುರಲ್ಲೇ ಈ ರೀತಿಯ ಹೀನ ವರ್ತನೆ ನಡೆದರೂ ಅವರ ವಿರುದ್ಧ ಕ್ರಮಗೊಂಡಿಲ್ಲ. ಇದರಿಂದ ನಿಜವಾದ ದಲಿತ ವಿರೋಧಿಗಳು, ಸಂವಿಧಾನ ವಿರೋಧಿಗಳು ಯಾರು ಎನ್ನುವುದು ತಿಳಿಯುತ್ತದೆ. ಕೂಡಲೇ ಅವಮಾನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವಿಜುಗೌಡ ಪಾಟೀಲ ಮಾತನಾಡಿ, ಎಸ್‌ಟಿ ಸಮುದಾಯದವರಿಗೆ ಕಲ್ಪಿಸಬೇಕಾದ ರೂ. 187 ಕೋಟಿ ಹಣವನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಅನೇಕ ನಕಲಿ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ಕೊಳ್ಳೆ ಹೊಡೆದು, ಆ ಸಮುದಾಯಕ್ಕೆ ಅನ್ಯಾಯದ ಜೊತೆಗೆ ಅಮಾಯಕ ನೌಕರನ ಸಾವಿಗೂ ಕಾರಣವಾಗಿದೆ. ಅಲ್ಲದೆ, ದಲಿತರು, ಹಿಂದುಳಿದವರ ಪರವೆಂದು ಭಾಷಣ ಮಾಡಿ ಅಧಿಕಾರಕ್ಕೆ ಬಂದು, ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸಿಗಬೇಕಾದ ಎಸ್‌ಸಿಪಿ, ಟಿಎಸ್‌ಪಿಯ ರೂ.25 ಸಾವಿರ ಕೋಟಿ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಬಳಸಿಕೊಳ್ಳುವ ಮೂಲಕ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಾಲ್ಮೀಕಿ ಹಗರಣದಲ್ಲಿ ಅವ್ಯವಹಾರ ಆಗಿರುವುದು ನಿಜವೆಂದು ಒಪ್ಪಿಕೊಂಡಿದ್ದಾರೆ. ಇನ್ನು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಗಳ ಕುಟುಂಬವೇ ಸಿಲುಕಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಈ ಮೂಲಕ ಸಿದ್ದರಾಮಯ್ಯನವರ ಅಸಲಿ ಮುಖ ಹೊರ ಬಂದಿದೆ. ಹೀಗಾಗಿ ಕೂಡಲೇ ರಾಜೀನಾಮೆ ನೀಡಿ, ತನಿಖೆಗೆ ಸಹಕಾರ ನೀಡಬೇಕು. ರಾಜ್ಯಪಾಲರಿಗೆ ಗೌರವ ನೀಡುವ ಪದ್ಧತಿ ಬೆಳೆಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ವಾಲ್ಮೀಕಿ, ಮುಡಾ ಹಗರಣಗಳ ಬಗ್ಗೆ ದಾಖಲೆಗಳು ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿದ್ದರೂ, ಮುಖಮಂತ್ರಿಗಳು ಸೇರಿ ಇಡೀ ಸರ್ಕಾರ ಏನೂ ಮಾಡೇ ಇಲ್ಲವೆಂದು ಬಂಡತನ ಪ್ರದರ್ಶಿಸುವುದು ಸರಿಯಲ್ಲ. ಇಡೀ ರಾಜ್ಯಕ್ಕೆ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದರು.

ಮಾಜಿ ಶಾಸಕ ರಮೇಶ ಭೂಸನೂರ, ಅರುಣ ಶಹಾಪುರ, ಉಮೇಶ ಕೋಳಕೂರ, ಈರಣ್ಣ ಪಟ್ಟಣಶೆಟ್ಟಿ, ಪ್ರಭುಗೌಡ ಅಸ್ಕೆ, ಅನೀಲ ಜಮಾದಾರ, ಕಾಸುಗೌಡ ಬಿರಾದಾರ, ಸಿದ್ದು ಬುಳ್ಳ, ಮಂಜುನಾಥ ಮೀಸೆ, ಗುರುಲಿಂಗಪ್ಪ ಅಂಗಡಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಂಜು ಐಹೊಳಿ, ಮಳುಗೌಡ ಬಿರಾದಾರ, ಮಹೇಂದ್ರ ನಾಯಕ, ಶಂಕರ ಹೂಗಾರ, ಎಂ.ಎಸ್. ಕರಡಿ, ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ವಿಠಲ ಹೊಸಪೇಟ, ಸ್ವಪ್ನಾ ಕಣಮುಚನಾಳ, ಕುಮಾರ ಗಡಗಿ, ಮಹೇಶ ಒಡೆಯರ, ವಿಕ್ರಮ ಗಾಯಕವಾಡ, ವಿಜಯ ಜೋಶಿ, ಮಡಿವಾಳ ಯಾಳವಾರ, ಅಶೋಕ ಬೆಲ್ಲದ, ದತ್ತಾ ಗೊಲಂಡೆ, ರಾಹುಲ ಜಾಧವ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net