ಒಬಿಸಿ ಪಟ್ಟಿಗೆ ಮುಸ್ಲಿಮರ ಸೇರಿಸದಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

13
Published on

ಮೈಸೂರು: ಕೋಲ್ಕತ್ತಾದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನ್ಯಾಯಾಲಯ ಮುಂಭಾಗದಲ್ಲಿರುವ ಗಾಂಧಿ ಪುತ್ಥಳಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮುಸ್ಲಿಮರನ್ನು ಒಬಿಸಿಗೆ ಸೇರಿಸಬಾರದು ಎಂದು ನ್ಯಾಯಾಲಯ ಆದೇಶ ನೀಡಿದ್ದರೂ ಅದನ್ನು ಉಲ್ಲಂಘಿಸಿ ಮಮತಾ ಬ್ಯಾನರ್ಜಿ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಕಾನೂನಿನ ಮುಂದೆ ಯಾರು ದೊಡ್ಡವರಲ್ಲ. ನ್ಯಾಯಾಲಯಕ್ಕೆ ನಾವೆಲ್ಲರೂ ತಲೆ ಬಾಗಲೇಬೇಕು. ಹೀಗಿದ್ದರೂ ಮಮತಾ ಬ್ಯಾನರ್ಜಿ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ಹಿಂದುಳಿದ ವರ್ಗಗಳ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದರು.
ಒಬಿಸಿ ಪಟ್ಟಿಗೆ ಮುಸ್ಲಿಮರನ್ನು ಸೇರಿಸಿ ಹಿಂದುಳಿದವರಿಗೆ ಅನ್ಯಾಯ ಮಾಡಬಾರದು. ಹೀಗಾಗಿ ಯಾವುದೇ ಕಾರಣಕ್ಕೂ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿದಬಾರದು ಎಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಒಬಿಸಿ ಮೋರ್ಚಾದ ಬಾಲಚಂದ್ರು, ಮುಖಂಡರಾದ ಕೇಬಲ್ ಮಹೇಶ್, ರಘು, ಸತ್ಯಾನಂದ ವಿಟ್ಟು, ಮರಳೂರು ಮಹೇಶ್, ಕುಮಾರ್ ಹುಣಸೂರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net