

ಶಿವಮೊಗ್ಗ: ಮುಡಾ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರನ್ನು ಅಪಮಾನ ಮಾಡುತ್ತಿರುವ ಕಾಂಗ್ರೆಸ್ ವರ್ತನೆ ಖಂಡಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ, ಎಸ್‌ಸಿ, ಎಸ್‌ಟಿಗಳಿಗೆ ಮೀಸಲಿಟ್ಟ ಅನುದಾನವನ್ನೂ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದೆ. ಇದೀಗ ಮುಡಾ ಹಗರಣದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಹೆಸರು ಕೇಳಿಬಂದಿದೆ. ಆದರೆ ರಾಜ್ಯಪಾಲರ ತೇಜೋವಧೆ ಮಾಡುತ್ತಿರುವುದು ಖಂಡನೀಯ. ಈಗಾಗಲೇ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದಾರೆಂದು ಗೊತ್ತಾಗಿದೆ. ಅಲ್ಲದೇ ರಾಜ್ಯಪಾಲರು ಕೂಡ ತನಿಖೆಗೆ ಒಪ್ಪಿಗೆ ನೀಡಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ನಾಯಕರು ರಾಜ್ಯಪಾಲರ ಮೇಲೆ ಮುಗಿಬಿದ್ದಿರುವುದು ಶೋಷಿತ ಸಮುದಾಯದ ವಿರೋಧಿ ಪ್ರವೃತ್ತಿಗೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರನ್ನು ಅಪಮಾನ ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ವಿರುದ್ಧ ಜಾತಿನಿಂದನೆ ಕೇಸ್ ದಾಖಲಿಸಬೇಕು. ಪರಿಶಿಷ್ಟ ಸಮುದಾಯಕ್ಕೆ ಸೇರಬೇಕಿದ್ದ ಹಣ ದುರ್ಬಳಕೆ ಮಾಡಿಕೊಂಡಿರುವ ಸಚಿವರನ್ನು ಮನೆಗೆ ಕಳುಹಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಹೊಣೆ ಎಂದಿರುವ ಮತ್ತು ಬಾಂಗ್ಲಾದ ಸ್ಥಿತಿ ಕರ್ನಾಟಕಕ್ಕೂ ಬರುತ್ತದೆ ಎಂದಿರುವ ಸಚಿವರಾದ ಜಮೀರ್ ಅಹಮ್ಮದ್ ಖಾನ್, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಎಂಎಲ್‌ಸಿ ಐವಾನ್ ಡಿಸೋಜ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಮಾಜಿ ಸಚಿವ ಕೆ.ಬಿ.ಅಶೋಕನಾಯ್ಕ, ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್.ದತ್ತಾತ್ರಿ, ಪ್ರಮುಖರಾದ ಸುರೇಖಾ ಮುರಳೀಧರ್, ಎನ್.ಕೆ.ಜಗದೀಶ್, ಎನ್.ಜೆ.ನಾಗರಾಜ್, ಎಚ್.ಸಿ.ಮಾಲತೇಶ್, ಐಡಿಯಲ್ ಗೋಪಿ, ಶಿವಾನಂದ್, ಎಸ್.ಜ್ಞಾನೇಶ್ವರ್, ರಾಹುಲ್ ಬಿದರೆ, ಕೆ.ವಿ.ಅಣ್ಣಪ್ಪ, ರತ್ನಾಕರ್ ಶಣೈ, ಜಿಲ್ಲಾ ಮಹಿಳಾ ಬಿಜೆಪಿ ಅಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ಸುಮಲತಾ, ರಶ್ಮಿ ಇತರರಿದ್ದರು.