

ಹುಬ್ಬಳ್ಳಿ : ರಾಜ್ಯ ರಾಜಧಾನಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾರದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಇಲ್ಲಿನ ಹಳೇ ಹುಬ್ಬಳ್ಳಿ ಇಂಡಿಪಂಪ್ ಸರ್ಕಲ್ನಲ್ಲಿ ಬುಧವಾರ ಬುಟ್ಟಿ, ಸಲಕೆ, ಗುದ್ದಲಿಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.
ರಾಜಧಾನಿ ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ತುಂಬಿವೆ. ಸರ್ಕಾರ ರಾಜ್ಯದ ಮಾನ ಹರಾಜು ಹಾಕುತ್ತಿದೆ. ಐಟಿ ಹಬ್ ಆಗಿದ್ದ ಬೆಂಗಳೂರು ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಪ್ರತಿಭಟನಾಕಾರರು ದೂರಿದರು.
ಈ ದುಸ್ಥಿತಿ ಬೆಂಗಳೂರಿನಲ್ಲಿ ಮಾತ್ರ ಇಲ್ಲ. ಬದಲಾಗಿ, ರಾಜ್ಯದ ಎಲ್ಲ ನಗರ, ಪಟ್ಟಣಗಳ ಸ್ಥಿತಿಯೂ ಇದೇ ಆಗಿದೆ. ರಾಜ್ಯದ ಅಭಿವೃದ್ಧಿಗೆ ಮೂಲ ಸೌಕರ್ಯ ಒದಗಿಸದೇ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ವ್ಯಯಿಸುತ್ತಿದೆ. ಆದರೂ, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿಲ್ಲ ಎಂದು ಟೀಕಿಸಿದರು.
ಗುಂಡಿಗಳಿಗೆ ಕಡಿ ಹಾಕಿ ಮುಚ್ಚುವ ಮೂಲಕ ರಾಜ್ಯ ಸರ್ಕಾರವನ್ನು ಅಣಕಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭಾವಚಿತ್ರ ಹಿಡಿದು, ಗುಂಡಿಗಳ ಜನಕನಿಗೆ ಧಿಕ್ಕಾರ ಎಂದು ಕೂಗಿದರು.
ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಎಂ.ಆರ್. ಪಾಟೀಲ ಮಾತನಾಡಿ, ಸರ್ಕಾರದ ಬೇಜವಾಬ್ದಾರಿತನವನ್ನು ಟೀಕಿಸಿದರು.
ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ವಸಂತ ನಾಡಜೋಶಿ, ಷಣ್ಮುಖ ಗುರಿಕಾರ, ಈರಣ್ಣ ಜಡಿ, ತೋಟಪ್ಪ ನಿಡಗುಂದಿ, ಮಂಜುನಾಥ ಚಿಂತಗಿಂಜಲ್, ಕೃಷ್ಣಾ ಗಂಡಗಾಳೇಕರ, ಪ್ರೀತಂ ಅರಕೇರಿ, ಪ್ರವೀಣ ಹುರಳಿ, ಡಾ ರವೀಂದ್ರ ಯಲಕಾನ, ವೆಂಕಟೇಶ ಕಾಟವೆ, ಪ್ರವೀಣ ಪವಾರ, ಮಂಜುನಾಥ ಗುಂಡಪಲ್ಲಿ, ಮೇಘನಾ ಶಿಂಧೆ, ಅಕ್ಕಮಹಾದೇವಿ ಹೆಗಡೆ, ಲಕ್ಷೀ ದೊಡ್ಡಮನಿ, ಮಂಜು ಕಲಾಲ, ಪ್ರಿನ್ಸ್ ಶಮಾ, ಬಸವರಾಜ ಜಾಬೀನ, ಶಶಿಮೌಳಿ ಕುಲಕರ್ಣಿ, ಮಹೇಶ ಲಕಾಜನವರ, ಲಕ್ಷ್ಮೀಕಾಂತ ಘೋಡಕೆ, ಸಿದ್ದನಗೌಡ್ರ ಪಾಟೀಲ, ರಾಜು ಕೋರ್ಯಾಣಮಠ, ಕಲಮೇಶ ಬೇಳೂರ, ಸಂತೋಷ ಜೀವನಗೌಡ್ರ, ಶಿವಾನಂದ ಗುಂಡಗೋವಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.