

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಿದ್ದರಾಮಯ್ಯ ಅವರನ್ನು ಹೋಲಿಕೆ ಮಾಡಿರುವ ಡಾ.ಯತೀಂದ್ರ ಅವರಿಗೆ ನಾಲ್ವಡಿ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಅಂಚೆ ಮೂಲಕ ಕಳುಹಿಸುವ ಮೂಲಕ ಬಿಜೆಪಿ ಮುಖಂಡರು, ವಿನೂತನವಾಗಿ ಪ್ರತಿಭಟಿಸಿದರು.
ನಗರದ ನೆಹರು ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗದ ಅಂಚೆ ಡಬ್ಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಾ.ಯತೀಂದ್ರ ಅವರ ವಿಳಾಸ ಬರೆದ ಪುಸ್ತಕಗಳನ್ನು ಹಾಕಲಾಯಿತು.
ಬಿಜೆಪಿ ಮುಖಂಡ ದಿನೇಶ್‌ಗೌಡ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಹಾಗೂ ಕೊಡುಗೆ ಬಗ್ಗೆ ತಿಳಿಯದೆ ಯತೀಂದ್ರ ಅವರು, ತಂದೆಗೆ ಹೋಲಿಕೆ ಮಾಡಿದ್ದಾರೆ. ಹಾಗಾಗಿ ಅವರಿಗೆ ನಾಲ್ವಡಿ ಅವರ ಜೀವನ, ಕೊಡುಗೆ ಕುರಿತು ತಿಳಿಸುವ ಪುಸ್ತಕವನ್ನು ಕಳುಹಿಸಲಾಗಿದೆ ಎಂದರು.
ಕಾಂತರಾಜ್ ವರದಿ ಬಗ್ಗೆಯೇ ತಿಳಿಯದ ಯತೀಂದ್ರ, ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ, ಪ್ರಗತಿ ಎಲ್ಲಿ ತಿಳಿಯಬೇಕು. ನಾಲ್ವಡಿ ಅವರ ಹೆಸರು ಹೇಳುವ ಯೋಗ್ಯತೆ ಅವರಿಗೆ ಇಲ್ಲ. ಆಧುನಿಕ ಭಗೀರಥರನ್ನು ಸಿದ್ದರಾಮಯ್ಯ ಅವರಿಗೆ ಹೋಲಿಕೆ ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಟೀಕಿಸಿದರು.
ಯತೀಂದ್ರ ಅವರು ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಪುಸ್ತಕವನ್ನು ಓದಿ ತಿಳಿದುಕೊಂಡು ನಂತರ ಸಾರ್ವಜನಿಕವಾಗಿ ಹೇಳಿಕೆ ನೀಡಬೇಕು. ಮೊದಲು ಮೈಸೂರಿನ ಅಭಿವೃದ್ಧಿಯ ಬಗ್ಗೆ ಮಾತನಾಡಿ, ನಿಮ್ಮ ತಂದೆಯವರ ಅಭಿವೃದ್ಧಿ ಏನು ಎಂದು ನಿಮಗೆ ನೀವೇ ಪ್ರಶ್ನೆಸಿಕೊಳ್ಳಿ, ನಿಮ್ಮ ಪಕ್ಷದ ಒಳ ಜಗಳಗಳ ಬಗ್ಗೆ ಮಾತನಾಡಿ. ಅದನ್ನು ಬಿಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ ಮಾತನಾಡುತ್ತೀರಲ್ಲ ನಾಚಿಕೆಯಾಗುವುದಿಲ್ಲವೇ?. ಇಂತಹ ಹೇಳಿಕೆಗೆ ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಯುವ ಮೋರ್ಚಾ ಅಧ್ಯಕ್ಷ ಅರ್ಜುನ್, ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ್, ಮಂಜು, ಮುಖಂಡರಾದ ಪಂಕಜ್, ಶ್ರೀನಿವಾಸ್, ಸೂರ್ಯ, ಪ್ರವೀಣ್ ಶೆಟ್ಟಿ ಇತರರು ಇದ್ದರು.