

ಮಂಡ್ಯ: ಕನ್ನಡ ಚಲನಚಿತ್ರ ಕಲಾವಿದರಿಗೆ ಭಯ ಹುಟ್ಟಿಸುವ ರೀತಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಕ್ಷಣ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ನಗರದ ಪ್ರಧಾನ ಅಂಚೆ ಕಚೇರಿ ಎದುರು ಪತ್ರ ಚಳವಳಿ ನಡೆಸಿದರು.
ಅಂಚೆ ಕಚೇರಿ ಜಮಾವಣೆಗೊಂಡ ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ಅವರ ಮನೆ ವಿಳಾಸಕ್ಕೆ ನಟ್ಟು ಬೋಲ್ಟ್ ಕಳುಹಿಸುವ ಮೂಲಕ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಲಾವಿದರಿಗೆ ಅವಮಾನ ಮಾಡುವ ರೀತಿಯಲ್ಲಿ ಸ್ವಹಿತಕ್ಕಾಗಿ ಕನ್ನಡ ಚಲನಚಿತ್ರದ ಕೆಲವು ನಟರನ್ನು ಮೇಕೆದಾಟು ಯೋಜನೆಯ ಪ್ರತಿಭಟನೆಯಲ್ಲಿ ಬಳಸಿಕೊಂಡ ಡಿ.ಕೆ.ಶಿವಕುಮಾರ್ ಅವರು, ಹಳೆಯದನ್ನೆಲ್ಲ ಮರೆತು ಅವರ ನಟ್ಟು ಬೋಲ್ಟ್ ಟೈಟ್ ಮಾಡುತ್ತೇನೆಂದು ಹೇಳಿರುವ ಮಾತು ಖಂಡನೀಯ ಎಂದು ಕಿಡಿಕಾರಿದರು.
ಡಿ.ಕೆ.ಶಿವಕುಮಾರ್ ಅವರು ಮೊದಲು ಕುಸಿದಿರುವ ತಮ್ಮ ಸರ್ಕಾರದ ಆಡಳಿತ ಯಂತ್ರವನ್ನು ಸರಿಪಡಿಸಿಕೊಳ್ಳಲಿ. ಸರ್ಕಾರದ ನಟ್ಟು ಬೋಲ್ಟ್ ಅನ್ನು ಟೈಟ್ ಮಾಡಿಕೊಳ್ಳಲಿ. ತಮ್ಮದೇ ಪಕ್ಷದ ರಾಜಕೀಯ ಮುತ್ಸದ್ದಿಗಳು ಬೇಕಾಬಿಟ್ಟಿ ಮಾತನಾಡಿ ಜನರ ವಿರೋಧ ಕಟ್ಟಿಕೊಳ್ಳುತ್ತಿದ್ದಾರೆ. ಅವರ ನಟ್ಟು ಬೋಲ್ಟ್ ಅನ್ನು ಟೈಟ್ ಮಾಡಲಿ. ಚಲನಚಿತ್ರ ಕಲಾವಿದರು ಕನ್ನಡಿಗರ ಆಸ್ತಿ ಎನ್ನುವುದನ್ನು ಮರೆತು ಮಾತನಾಡುವುದು ಸರಿಯಲ್ಲಿ ತಕ್ಷಣ ಅವರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ನಾಗಾನಂದ, ವಿನೋಭಾ, ಗೊರವಾಲೆ ಶಿವಣ್ಣ, ಪ್ರಸನ್ನ ಇತರರಿದ್ದರು.