

ಮಂಡ್ಯ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಪಮಾನಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪ್ರತಿಪಕ್ಷ ಸಂಸದರ ಅಸಭ್ಯ ವರ್ತನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಸತ್‌ನ ಉಭಯ ಸದನಗಳಲ್ಲಿ ಸಭಾಧ್ಯಕ್ಷರ ಮನವಿಗೆ ಸ್ಪಂದಿಸದ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಮಾತ್ರವಲ್ಲದೆ ನಾಮಫಲಕಗಳನ್ನು ಪ್ರದರ್ಶಿಸಿದ್ದು, ನಿರಂತರ ಅಸಮರ್ಪಕ ನಡವಳಿಕೆಯಿಂದ ಅಮಾನತು ಮಾಡಲಾಗಿದೆ. ಪ್ರತಿಪಕ್ಷ ಸಂಸದರು ಸದನದಲ್ಲಿ ಗದ್ದಲ ಸೃಷ್ಟಿಸುವ ಕಲಾಪಕ್ಕೆ ಅಡ್ಡಿಪಡಿಸುವ ಪೂರ್ವಯೋಜಿತ ಕಾರ್ಯತಂತ್ರ ರೂಪಿಸುವ ಮೂಲಕ ಸುಗಮ ಕಲಾಪ ತಡೆಯುವ ಉದ್ದೇಶಪೂರ್ವಕ ಕೃತ್ಯ ಮಾಡಿದ್ದಾರೆ ಎಂದು ಹೇಳಿದರು.
ರಾಜ್ಯಸಭೆ ಸಭಾಧ್ಯಕ್ಷರಾಗಿರುವ ಉಪರಾಷ್ಟ್ರಪತಿಗಳನ್ನ ನೋಡುತ್ತಾ ನಗುವುದು. ವಿಡಿಯೋ ಚಿತ್ರಕರಿಸುತ್ತಾ ಅಪಹಾಸ್ಯ ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ದೇಶದ ಮೇಲಿನ ಗೌರವಯುತ ನಡವಳಿಕೆಯೇ ಎಂದು ಪ್ರಶ್ನಿಸಿದರು. ಜಮ್ಮು ಕಾಶ್ಮೀರ, ಪಾಂಡಿಚೇರಿಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವುದು ಸೇರಿ ರಾಷ್ಟ್ರಕ್ಕೆ ಅನುಕೂಲವಾಗುವಂತಹ ಹಲವು ಮಸೂದೆಗಳನ್ನು ಸದನದಲ್ಲಿ ಮಂಡಿಸಲಾಗುತ್ತಿದೆ. ಆದರೆ ಪ್ರತಿಪಕ್ಷ ಸಂಸದರು ಇಂತಹ ಪ್ರಮುಖ ಮಸೂದೆ ವಿಷಯ ಕುರಿತು ಅರ್ಥಪೂರ್ಣ ಚರ್ಚೆ ಮಾಡಿದ್ದರೆ ಪ್ರಯೋಜನವಾಗುತ್ತಿತ್ತು ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಗರ ಘಟಕದ ಅಧ್ಯಕ್ಷ ವಿವೇಕ್, ನಗರಸಭೆ ಮಾಜಿ ಸದಸ್ಯ ಶಿವಲಿಂಗಯ್ಯ, ಮಾಧ್ಯಮ ಸಂಚಾಲಕ ನಾಗಾನಂದ, ನಿತ್ಯಾನಂದ, ಚಂದ್ರು, ಪ್ರಸನ್ನ ಇತರರಿದ್ದರು.