

ಮಂಗಳೂರು: ಗ್ಯಾರಂಟಿ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಂದಿನಿಂದ ಗ್ಯಾರಂಟಿ ಹಣಕ್ಕಾಗಿ ರಾಜ್ಯ ಸರ್ಕಾರ ಬೆಲೆಏರಿಕೆಗೆ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಜೂ.20ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿರುವ ಅಂಗವಾಗಿ ಬೆಳಿಗ್ಗೆ 10.30ಕ್ಕೆ ಪಿವಿಎಸ್ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಲ್ಲವೂ ಉಚಿತ, ಪ್ರತಿಯೊಬ್ಬರಿಗೂ ಖಚಿತ, ಇದು ನಮ್ಮ ಗ್ಯಾರಂಟಿ ಎನ್ನುತ್ತಾ ಕರ್ನಾಟಕದಲ್ಲಿ ಅಧಿಕಾರಕ್ಕೇರಿದ ಕಾಂಗ್ರೆಸ್ ನಿರಂತರವಾಗಿ ಬೆಲೆ ಏರಿಕೆಯ ಗ್ಯಾರಂಟಿ ನೀಡಿದ್ದರ ಪರಿಣಾಮವಾಗಿ ರಾಜ್ಯದ ಜನರು ಕಂಗಾಲಾಗಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಪೆಟ್ರೋಲ್ ಡೀಸೆಲ್ ದರ ಏರಿಸಿ ಜನತೆಯನ್ನು ಇನ್ನಷ್ಟು ಸಂಕಟಕ್ಕೆ ದೂಡಲಾಗಿರುವುದು ಖಂಡನೀಯ ಎಂದರು.
ಕಳೆದ ಒಂದು ವರ್ಷದಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ ಕರ್ನಾಟಕದ ಜನತೆಯ ಮೇಲೆ ಸರ್ಕಾರ ದ್ವೇಷ ಸಾಧನೆಗೆ ಹೊರಟಿದ್ದು ಬೆಲೆ ಏರಿಕೆಯ ಅಸ್ತ್ರವನ್ನು ಉಪಯೋಗಿಸಿದೆ. ಈಗಾಗಲೇ ಹಾಲು, ವಿದ್ಯುತ್, ಸಾರಿಗೆ ದರ, ಮನೆ ತೆರಿಗೆ, ರಿಜಿಸ್ಟ್ರೇಷನ್, ಸ್ಟ್ಯಾಂಪ್ ಡ್ಯೂಟಿ, ವಾಹನ ನೋಂದಣಿ, ಅಬಕಾರಿ ಸುಂಕ, ಸೇರಿದಂತೆ ಎಲ್ಲಾ ಅಗತ್ಯ ದಿನಬಳಕೆಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಹೈರಾಣಾಗಿದ್ದ ಜನಸಾಮಾನ್ಯರಿಗೆ ಇದು ಬಹುದೊಡ್ಡ ಹೊಡೆತವಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸರಕು ಸಾಗಾಣಿಕೆ, ಹಾಗೂ ಸಾರಿಗೆ ದರಗಳೂ ಇನ್ನೂ ಹೆಚ್ಚಳವಾಗಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಲಿದೆ. ಅಂತಾರಾಷ್ಟ್ರೀಯ ಮಟ್ಟದ ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗದಿದ್ದರೂ, ಇಡೀ ದೇಶದ ಯಾವೊಂದು ರಾಜ್ಯದಲ್ಲೂ ತೈಲ ಬೆಲೆ ಏರಿಸದಿದ್ದರೂ, ನಮ್ಮ ರಾಜ್ಯದಲ್ಲಿ ಮಾತ್ರ ಧಿಡೀರನೆ ಜನಸಾಮಾನ್ಯರ ಜೇಬಿಗೆ ಕೈ ಹಾಕಿರುವುದು ಕಾಂಗ್ರೆಸಿನ ನೈಜ ಮುಖದ ಅನಾವರಣವಾಗಿದೆ ಎಂದರು.
*ಬೆಲೆಯೇರಿಕೆಯ ಹೊರೆ ಯಾಕೆ?
ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದ್ದು ಯಾವುದೇ ಕ್ಷೇತ್ರಗಳ ಅಭಿವೃದ್ಧಿಗೂ ಒಂದೇ ಒಂದು ರೂಪಾಯಿ ಬಿಡುಗಡೆಯಾಗುತ್ತಿಲ್ಲ. ಆದರೂ ಮಾನ್ಯ ಮುಖ್ಯಮಂತ್ರಿಗಳು, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ, ಸುಭದ್ರವಾಗಿದೆ, ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ ಎಂದು ಪದೇ ಪದೇ ರಾಜ್ಯದ ಜನತೆಯ ಮುಂದೆ ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಜನಸಾಮಾನ್ಯರಿಗೆ ಈ ಬೆಲೆಯೇರಿಕೆಯ ಹೊರೆ ಯಾಕೆ? ಎಂದು ಪ್ರಶ್ನಿಸಿದರು.
ಮಂಗಳೂರು ನಗರ ದಕ್ಷಿಣ ಮಂಡಲದ ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಂಡಲದ ನಿಕಟಪೂರ್ವ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಲಲ್ಲೇಶ್ ಕುಮಾರ್ ಹಾಗೂ ರಮೇಶ್ ಹೆಗ್ಡೆ, ಮಾಜಿ ಉಪಮೇಯರ್ ಪೂರ್ಣಿಮಾ, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷೆ ಪೂರ್ಣಿಮಾ ರಾವ್, ಮಹಾನಗರ ಪಾಲಿಕೆ ಸದಸ್ಯ ಭರತ್ ಸೂಟರ್ ಪೇಟೆ, ಮಂಗಳೂರು ನಗರ ದಕ್ಷಿಣ ಯುವ ಮೋರ್ಚಾ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ ಇದ್ದರು.