ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

16M.D.R.1 (1)
ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತದಿಂದಾಗಿ 11 ಜನರ ಸಾವಿಗೆ ಸರ್ಕಾರದ ಬೇಜಾಬ್ದಾರಿತನವೇ ಕಾರಣ ಎಂದು ಆರೋಪಿಸಿ ಮದ್ದೂರು ತಾಲೂಕು ಕಚೇರಿ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಡಾ.ಸ್ಮಿತಾರಾಮು ಅವರಿಗೆ ಮನವಿ ಪತ್ರ ಸಲ್ಲಿಸಿತು. ಸಿ.ಕೆ.ಸತೀಶ್, ಮ.ನ.ಪ್ರಸನ್ನಕುಮಾರ್, ಜಿ.ಸಿ.ಮಹೇಂದ್ರ, ರೂಪಾ, ಎಂ.ಸಿ.ಸಿದ್ದು, ನಿತ್ಯಾನಂದ ಇದ್ದರು.
Published on

ಮದ್ದೂರು: ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತದಿಂದಾಗಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಳ್ಳಲು ಸರ್ಕಾರದ ಬೇಜಾಬ್ದಾರಿತನವೇ ಕಾರಣ ಎಂದು ಆರೋಪಿಸಿ ಮದ್ದೂರು ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಘಟನೆಯಲ್ಲಿ ಸರ್ಕಾರ ವೈಫಲ್ಯ ಎದ್ದು ಕಾಣುತ್ತಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್ ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ರೀತಿಯ ಪೂರ್ವ ಯೋಜನೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ವಿಜಯೋತ್ಸವ ಆಚರಿಸಲು ಮುಂದಾಗಿದ್ದು, ಅಮಾಯಕ ಜನರ ಪ್ರಾಣ ಹಾನಿಗೆ ಕಾರಣವಾಗಿದೆ. ಅಲ್ಲದೆ ಕೇಂದ್ರ ಸರ್ಕಾರ ನಾಗರಿಕರ ಅನುಕೂಲಕ್ಕಾಗಿ ತೆರೆದಿದ್ದ ಜನೌಷಧ ಕೇಂದ್ರಗಳನ್ನು ಮುಚ್ಚಲು ಆದೇಶಿಸುವುದರ ಮೂಲಕ ಮೆಡಿಕಲ್ ಮಾಫಿಯಾಗೆ ರಾಜ್ಯ ಸರ್ಕಾರ ತಲೆ ಬಾಗಿ ನಿಂತಿದೆ ಎಂದು ಆರೋಪಿಸಿದರು.

ಈ ಕೂಡಲೇ ಜನೌಷಧ ಕೇಂದ್ರಗಳನ್ನು ಮುಚ್ಚಲು ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಬೆಂಗಳೂರಿನಲ್ಲಿ ವಿಜಯೋತ್ಸವ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ತಹಸೀಲ್ದಾರ್ ಡಾ.ಸ್ಮೀತಾರಾಮು, ಉಪ ತಹಸೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮುಖಂಡರಾದ ರೂಪಾ, ಜಿ.ಸಿ.ಮಹೇಂದ್ರ, ಮಧು, ಮ.ನ.ಪ್ರಸನ್ನ ಕುಮಾರ್, ಎಂ.ಸಿ.ಸಿದ್ದು, ನಿತ್ಯಾನಂದ, ಜಿ.ಬಿ.ಕಿಟ್ಟಿ, ಲಿಂಗರಾಜು, ಮಲ್ಲಿಕಾರ್ಜುನ, ಶ್ರೀನಿವಾಸ್‌ಶೆಟ್ಟಿ, ದ್ಯಾವಪ್ಪ, ಕ್ರಾಂತಿ ಮಂಜು, ರವಿಕುಮಾರ್, ಮಿಥುನ್, ಮಮತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net