ಬೆಳಗಾವಿ ಪ್ರಕರಣ, ಭ್ರೂಣಹತ್ಯೆ ಪ್ರಕರಣ ಖಂಡಿಸಿ ಬಿಜೆಪಿ ಪ್ರತಿಭಟನೆ

10
Published on

ಮೈಸೂರು: ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಘಟನೆ ಹಾಗೂ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ಭ್ರೂಣಹತ್ಯೆ ಪ್ರಕರಣಗಳನ್ನು ಖಂಡಿಸಿ ಬಿಜೆಪಿ ಮೈಸೂರು ನಗರ ಮತ್ತು ಗ್ರಾಮಾಂತರ ಜಿಲ್ಲಾ ಘಟಕದ ವತಿಯಿಂದ ಶನಿವಾರ ಪ್ರತಿಭಟನೆ ನಡೆಯಿತು.

ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಸಾಮೂಹಿಕವಾಗಿ ಹಲ್ಲೆ ಮಾಡಿರುವುದು ಖಂಡನೀಯ. ಜನತೆಗೆ ಪೊಲೀಸ್ ಮತ್ತು ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಹೋಗಿದೆ. ಹಾಗಾಗಿಯೇ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಹಳೇ ಮೈಸೂರು ಭಾಗದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆಗಳು ನಡೆದಿರುವುದು ಇಡೀ ಸಮಾಜ ತಲೆತಗ್ಗಿಸುವಂತಹದ್ದು. ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಜತೆಗೆ ಕಾನೂನು ಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡಿರುವ ಆಸ್ಪತ್ರೆ, ಕ್ಲಿನಿಕ್‌ಗಳನ್ನು ಬಂದ್ ಮಾಡಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮುಖಂಡರಾದ ಮೈ.ವಿ.ರವಿಶಂಕರ್, ಮಂಗಳಾ ಸೋಮಶೇಖರ್, ಎಚ್.ಜಿ.ಗಿರಿಧರ್, ಎಲ್.ಆರ್.ಮಹದೇವಸ್ವಾಮಿ, ಮೋಹನ್, ವಾಣೀಶ್‌ಕುಮಾರ್, ಸಿ.ರಮೇಶ್, ಕವೀಶ್‌ಗೌಡ, ಹೇಮಾ ನಂದೀಶ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net