ಗ್ಯಾರಂಟಿ ನಿಲ್ಲಿಸಬೇಕೆಂದು ಪ್ರತಿಭಟನೆ ನಡೆಸಿದ್ದಾರೆ

saleem ahmad latest
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ತೈಲ ಬೆಲೆ ಏರಿಕೆಯನ್ನು ಖಂಡಿಸಿ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂಬ ಧೋರಣೆಯಿಂದ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಬೆಲೆಯನ್ನು ಲೀಟರ್​ಗೆ 65ರಿಂದ 110 ರೂ. ಗೆ ಹೆಚ್ಚಿಸಿದ್ದು ಹಾಗೂ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು 400ರಿಂದ 1200 ರೂ. ಗೆ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ. ಆಗ ಬಿಜೆಪಿಯವರು ಪ್ರತಿಭಟನೆ ಮಾಡಿರಲಿಲ್ಲ. ಈಗ ಬಿಜೆಪಿಯವರ ಪ್ರತಿಭಟನೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಉದ್ದೇಶದಿಂದ ಕೂಡಿದೆ ಎಂದರು.

ಕಾಂಗ್ರೆಸ್ ಪಕ್ಷ ಚುನಾವಣೆ ಉದ್ದೇಶಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ನೀಡಿರಲಿಲ್ಲ. ಒಂದು ವರ್ಷದ ಅವಧಿಯಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರಿಗೆ, ವಿಶೇಷವಾಗಿ ಬಡವರಿಗೆ ಅನುಕೂಲ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಅಥವಾ ಈಗಿರುವ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ ಶಾಸಕರ ಹೇಳಿಕೆ ವೈಯಕ್ತಿಕವಾದುದು. ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟ ಪಡಿಸಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲೇಬೇಕು. ಆರೋಪಿಗಳನ್ನು ರಕ್ಷಿಸಬೇಕೆಂದು ಯಾವ ಸಚಿವರೂ ಒತ್ತಡ ತಂದಿಲ್ಲವೆಂದು ಹಾಗೂ ತಾವು ಯಾರ ಒತ್ತಡಕ್ಕೂ ಮಣಿಯುವುದಿಲ್ಲವೆಂದು ಈಗಾಗಲೇ ಮುಖ್ಯಮಂತ್ರಿಯವರು ಸ್ಪಷ್ಟ ಪಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಕೆಲಸದಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ ಎಂದರು.

ಕಿಚಡಿ ಸರ್ಕಾರಕ್ಕೆ ಆಯುಷ್ಯವಿಲ್ಲ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕಪಾಳಮೋಕ್ಷವಾಗಿದೆ. ಅದು ಕೇಂದ್ರದಲ್ಲಿ ಸರ್ಕಾರ ನಡೆಸುವ ನೈತಿಕ ಹಕ್ಕು ಕಳೆದುಕೊಂಡಿದೆ. ಚಂದ್ರಬಾಬು ನಾಯ್ಡು ಹಾಗೂ ನಿತೀಶಕುಮಾರ್ ಸಹಕಾರದಿಂದ ಎನ್​ಡಿಎ ಸರ್ಕಾರ ರಚಿಸಲಾಗಿದೆ. ಈ ಕಿಚಡಿ ಸರ್ಕಾರಕ್ಕೆ ಆಯುಷ್ಯವಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಲು ನಾಲಾಯಕ್ ಎಂದಿರುವ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕಿಡಿ ಕಾರಿದ ಸಲೀಂ ಅಹ್ಮದ್, ಜನಾರ್ದನ ರೆಡ್ಡಿಯೋರ್ವ ಅಯೋಗ್ಯ. ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಡಿ. ಬಸವರಾಜ, ಚಂದ್ರಶೇಖರ ಜುಟ್ಟಲ, ಶಹಜಮಾನ್ ಮುಜಾಹಿದ್, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net