1087 ಕೋಟಿ ರೂ. ಹೈನುಗಾರರ ಪ್ರೋತ್ಸಾಹಧನ ಬಾಕಿ

udp-26-bjp 1
Published on

ಉಡುಪಿ: ರಾಜ್ಯ ಸರ್ಕಾರ ಕಳೆದ 8 ತಿಂಗಳಿನಿಂದ ಹೈನುಗಾರರ 1087 ಕೋಟಿ ರೂ. ಪ್ರೋತ್ಸಾಹಧನ ಕೊಡದೆ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಹೈಕೋರ್ಟ್​ನಲ್ಲಿ ಪಿ ಐ ಎಲ್​ ದಾಖಲಿಸಿ ರೈತರಿಗೆ ಬಡ್ಡಿ ಸಮೇತ ಹಣವನ್ನು ದೊರಕಿಸಿಕೊಡಲು ಬಿಜೆಪಿ ಹಿಂದೇಟು ಹಾಕುವುದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನ್​ಕುಮಾರ್​ ಹೇಳಿದ್ದಾರೆ.

ರೈತಾಪಿ ವರ್ಗದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್​ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಹಿಂದಿನ ಸರ್ಕಾರ ಬಜೆಟ್​ನಲ್ಲಿ ರ ಬ್ಯಾಂಕ್​ ಸ್ಥಾಪನೆಗೆ 1 ಸಾವಿರ ಕೋಟಿ ರೂ. ತೆಗೆದಿರಿಸಿದ್ದು, ಇದರಿಂದ 16 ಲಕ್ಷ ಹೈನುಗಾರರಿಗೆ ಅನುಕೂಲವಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಈ ಹಣವನ್ನು ಯಾವುದೆಕ್ಕೆ ಬಳಸಿಕೊಂಡಿದೆ ಎಂಬುದು ತಿಳಿಯುತ್ತಿಲ್ಲ. ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ ಪ್ರಾರಂಭಿಸುವ ಯೋಜನೆ ರದ್ದಾಗಿದೆ. ರಾಜ್ಯದಲ್ಲಿ 5 ಎಕ್ರೆಗಿಂತ ಕಡಿಮೆ ಭೂಮಿ ಹೊಂದಿರುವ 4 ಕೋಟಿ ಹಿಡುವಳಿದಾರರಿದ್ದಾರೆ. ಹೀಗಾಗಿ ರೈತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ವಿದ್ಯಾಸಿರಿ ಯೋಜನೆ, ಕಿಸಾನ್​ ಸಮ್ಮಾನ್​ ಯೋಜನೆಯ ರಾಜ್ಯದ ಕಂತು 4 ಸಾವಿರ ರೂ. ಎಲ್ಲವೂ ಸ್ಥಗಿತಗೊಳಿಸಲಾಗಿದೆ ಎಂದರು.

ದಲ್ಲಾಳಿಗಳ ಸರ್ಕಾರ
ರಾಜ್ಯದಲ್ಲಿ ದಲ್ಲಾಳಿಗಳ ಪರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್​ 1 ವರ್ಷದ ಅವಧಿಯಲ್ಲಿ 2 ಲಕ್ಷಕ್ಕೂ ಅಧಿಕ ಎ್​ ಐ ಆರ್​ ದಾಖಲಿಸಿದೆ. ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸಲಾಗುತ್ತಿದೆ ಎಂದು ಆರೋಪಿಸಿದರು.

ಡಿಸಿ ಕಚೇರಿಯಲ್ಲಿ 50 ದನ ಕಟ್ಟುತ್ತೇವೆ
ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಹೈನುಗಾರರು ಮತ್ತು ರೈತರ ಬೇಡಿಕೆ ಈಡೇರಿಕೆಗೆ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಬೇಡಿಕೆಯನ್ನು ಪರಿಗಣಿಸದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ 50 ದನ ತಂದು ಕಟ್ಟುತ್ತೇವೆ ಎಂದು ಎಚ್ಚರಿಸಿದರು. ಬ್ರಹ್ಮಾವರ ಕೃಷಿ ಕಾಲೇಜನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಕರಾವಳಿಯ 3 ಜಿಲ್ಲೆಗಳ ರೈತರ ಮಕ್ಕಳಿಗೆ ತೊಂದರೆಯಾಗಿದೆ. ಬಿತ್ತನೆ ಬೀಜವನ್ನೂ ಸರಿಯಾಗಿ ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿದರು.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಮಲಾಕ್ಷ ಹೆಬ್ಬಾರ್​, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್​ ಕುಮಾರ್​, ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ್​ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಮಾಜಿ ಜಿಲ್ಲಾಧ್ಯಕ್ಷರಾದ ಸುರೇಶ್​ ನಾಯಕ್​ , ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಲಾಲಾಜಿ ಮೆಂಡನ್​ ಮೊದಲಾದವರು ಉಪಸ್ಥಿತರಿದ್ದರು. ಪುಷ್ಪರಾಜ್​ ಶೆಟ್ಟಿ ಸ್ವಾಗತಿಸಿ, ಮೋಹನ್​ ಚಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಟನೆ ಬಳಿಕ ಬಳಿಕ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net