ಸೆ.8ರಂದು ಜಿಲ್ಲಾದ್ಯಂತ ಪ್ರತಿಭಟನೆ: ಬಿಜೆಪಿ ರೈತ ಮೋರ್ಚಾ ಜಿಲ್ಲಾಧಕ್ಷ ಜೋಗಿಗೌಡ ಮಾಹಿತಿ

3
Published on

ಮಂಡ್ಯ: ಕಿಸಾನ್ ಸಮ್ಮಾನ್, ವಿದ್ಯಾಸಿರಿ ಸೇರಿದಂತೆ ಹಲವು ರೈತರಿಗೆ ಉಪಯುಕ್ತ ಯೋಜನೆಗಳನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಸೆ.8ರಂದು ಜಿಲ್ಲೆಯ ಎಲ್ಲ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧಕ್ಷ ಜೋಗಿಗೌಡ ತಿಳಿಸಿದರು.

ಬೆಲೆ ಏರಿಕೆಯಿಂದ ಈಗಾಗಲೇ ರೈತರು ಮತು ಜನಸಾಮಾನ್ಯರು ತತ್ತರಿಸಿದ್ದಾರೆ. ರೈತರ ಮಕ್ಕಳ ಗಾಯದ ಮೇಲೆ ಬರೆ ಎಳೆದಂತೆ ವಿದ್ಯಾಸಿರಿ ಯೋಜನೆಯನ್ನೂ ವಾಪಸ್ ಪಡೆಯಲಾಗಿದೆ. ತಮಿಳುನಾಡಿಗೆ ನೀರು ಬಿಟ್ಟು ರಾಜ್ಯ ಸರ್ಕಾರ ಈಗಾಗಲೇ ರೈತರಿಗೆ ದ್ರೋಹ ಎಸಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನಿರ್ದೇಶನ ನೀಡಿದೆ. ಅದರಂತೆ ರಾಜ್ಯ ಸರ್ಕಾರ ಮೇಲ್ಮನವಿ ಹೋಗುವುದನ್ನು ಬಿಟ್ಟು ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ತ.ನಾಡು ಸರ್ಕಾರ ಒಂದು ತಿಂಗಳ ಮುನ್ನವೇ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಕರ್ನಾಟಕದಿಂದ ನೀರು ಬಿಡಿಸುವಂತೆ ಕೇಳುತ್ತಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಪ್ರಾಧಿಕಾರದ ಆದೇಶದ ನಂತರ ಮನವಿ ಸಲ್ಲಿಸಲು ಮುಂದಾಗುತ್ತಾರೆ. ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡೆಯಿಂದಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮದಿಂದಾಗಿ ಹಲವಾರು ಹಳ್ಳಿಗಳಲ್ಲಿ ರೈತರ ಜಮೀನಿನ ಪೋಡಿ, ಪೌತಿ ಖಾತೆ ಸೇರಿದಂತೆ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಈಗ ಈ ಯೋಜನೆಯನ್ನು ನಿಲ್ಲಿಸಿದ್ದು, ಕಚೇರಿಗಳಲ್ಲೂ ರೈತರ ಕೆಲಸ ಮಾಡಿಕೊಡುವುದಿಲ್ಲ. ಇಲ್ಲವೇ ಇಂತಹ ಕಾರ್ಯಕ್ರಮಗಳಿಂದಲಾದರೂ ಕೆಲಸ ಮಾಡಿಕೊಡುವ ಇಚ್ಚಾಶಕ್ತಿ ಪ್ರದರ್ಶಿಸುವುದಿಲ್ಲ ಎಂದು ಕಿಡಿಕಾರಿದರು.

ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜವರೇಗೌಡ, ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ಕಷ್ಣ, ಉಪಾಧ್ಯಕ್ಷ ಶಂಕರ್, ಮುಖಂಡರಾದ ನಾಗಣ್ಣ, ಜೆ.ಜೆ.ನಿಂಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net